ಪೇರಲೆ ಹಣ್ಣು ಕಿತ್ತು ತಿಂದನೆಂದು ದಲಿತ ಯುವಕನ ಬರ್ಬರ ಕೊಲೆ
ಲಖನೌ: ಪೇರಲೆ ಹಣ್ಣು ಕಿತ್ತು ತಿಂದನೆಂದು 20 ವರ್ಷದ ಪರಿಶಿಷ್ಟ ಜಾತಿಯ ಯುವಕನನ್ನು ಹೊಡೆದು ಕೊಂದಿರುವ ಆಘಾತಕಾರಿ ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯಲ್ಲಿ ವರದಿಯಾಗಿದೆ.
ಮೃತ ಯುವಕನನ್ನು ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ. ಇವರು ಜಿಲ್ಲೆಯ ಮನೇನಾ ಗ್ರಾಮದವನು. ಹಣ್ಣಿನ ತೋಟದಿಂದ ನ.5ರಂದು ಪೇರಲೆ ಹಣ್ಣನ್ನು ಕೀಳುತ್ತಿದ್ದ ವೇಳೆ ಕಾವಲುಗಾರರ ಕೈಗೆ ಸಿಕ್ಕಿಬಿದ್ದಿದ್ದ. ಕಾವಲುಗಾರರು ಬಡಿಗೆಯಿಂದ ಓಂ ಪ್ರಕಾಶ್‌ನನ್ನು ತೀವ್ರವಾಗಿ ಥಳಿಸಿದ್ದರು ಎನ್ನಲಾಗಿದೆ. ಪ್ರಜ್ಞೆ ಕಳೆದುಕೊಂಡ ನಂತರ ಸಮೀಪದ ಜಮೀನಿನಲ್ಲಿ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಓಂ ಪ್ರಕಾಶ್ ಮನೆಗೆ ಬರದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಹಲವು ತಾಸುಗಳ ಶೋಧದ ನಂತರ ಜಮೀನೊಂದರಲ್ಲಿ ರಕ್ತದ ಮಡುವಿನಲ್ಲಿದ್ದ ಬಿದ್ದ ಓಂ ಪ್ರಕಾಶ್ ಪತ್ತೆಯಾಗಿದ್ದ. ಆಸ್ಪತ್ರೆಗೆ ಕೊಂಡೊಯ್ದಾಗ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಬನ್ವರಿಲಾಲ್ ಮತ್ತು ಭೀಮ್‌ಸೇನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ ಎಂದು ತಿಳಿದು ಬಂದಿದೆ.