ಕಾರಿಗೆ ಒರಗಿ ನಿಂತಿದ್ದ ಬಾಲಕನ ಎದೆಗೆ ಝಾಡಿಸಿ ಒದ್ದ ವ್ಯಕ್ತಿ
ತಲಶ್ಶೇರಿ: ತನ್ನ ಕಾರಿಗೆ ಒರಗಿ ನಿಂತಿದ್ದ ಆರು ವರ್ಷದ ಬಾಲಕನ ಎದೆಗೆ ಝಾಡಿಸಿ ಒದ್ದ ಕಣ್ಣೂರಿನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ಘಟನೆ ಕೇರಳದ ತಲಶ್ಶೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ವಾಹನ ದಟ್ಟಣೆಯ ರಸ್ತೆಯೊಂದರ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಒರಗಿ ನಿಂತಿದ್ದ ಬಾಲಕನನ್ನು ನೋಡಿದಾಕ್ಷಣ ಕಾರಿನ ಚಾಲಕ ಬಾಲಕನ್ನು ತುಳಿದ ಅಮಾನವೀಯ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಲಕ ಘಟನೆಯ ನಂತರ ಮೌನವಾಗಿ ಅತ್ತ ಸಾಗುತ್ತಿದ್ದಂತೆ ಆ ವ್ಯಕ್ತಿ ಕಾರಿನೊಳಗೆ ಕುಳಿತುಕೊಳ್ಳುತ್ತಾನೆ.
ಈ ಘಟನೆಯನ್ನು ಗಮನಿಸಿದ ಕೆಲ ಸ್ಥಳೀಯರು ತಕ್ಷಣ ಕಾರಿನ ಬಳಿ ಬಂದು ಆತನ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕುತ್ತಾರೆ. ಪರಿಸ್ಥಿತಿ ಕೈಮೀರಲಿದೆ ಎಂದು ತಿಳಿಯುತ್ತಲೇ ಆ ವ್ಯಕ್ತಿ ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ತೆರಳಿದ್ದ ಎಂದು ವರದಿಯಾಗಿದೆ.
ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಅದೇ ದಿನ ವಶಕ್ಕೆ ಪಡೆದುಕೊಂಡಿದ್ದರು. ಆತನನನ್ನು ಪೊನ್ನಿಯಂಪಲಂ ನಿವಾಸಿ ಶಿಹಶದ್ ಎಂದು ಗುರುತಿಸಲಾಗಿದೆ.
ಘಟನೆಯ ಪ್ರತ್ಯಕ್ಷಸಾಕ್ಷಿಯೊಬ್ಬರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತಾದರೂ ಆತನನ್ನು ನಂತರ ಬಿಡುಗಡೆಗೊಳಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.