ಕರಾವಳಿ

ಸುಳ್ಯ ನಗರ ಪಂಚಾಯತ್ ಸಭೆಯಲ್ಲಿ ಗದ್ದಲ: ಪೊಲೀಸ್ ಎಂಟ್ರಿ

ಸುಳ್ಯ: ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕೆಲವು ಸದಸ್ಯರ ಮಧ್ಯೆ ನೂಕಾಟ -ತಳ್ಳಾಟ ನಡೆದು ಕೈ ಕೈ ಮಿಲಾಯಿಸಿಕೊಂಡ ಘಟನೆ ಇಂದು ಸುಳ್ಯದಿಂದ ವರದಿಯಾಗಿದೆ. ಘಟನೆಯ ಮಾಹಿತಿ ತಿಳಿದು ಪೊಲೀಸರು ಆಗಮಿಸಿ ಸದಸ್ಯರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ.


ನಗರ ಪಂಚಾಯತ್‌ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರ ಅಧ್ಯಕ್ಷತೆಯಲ್ಲಿ ನ.2ರಂದು ನಡೆದ ಸಾಮಾನ್ಯ ಸಭೆಯಲ್ಲಿ ಇಂಜಿನಿಯರ್, ಆರೋಗ್ಯಾಧಿಕಾರಿ ಇಲ್ಲದೆ ಹಲವು ತಿಂಗಳಿನಿಂದ ನಗರ ಪಂಚಾಯತ್‌ನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸಭೆಗೆ ಇಂಜಿನಿಯರ್, ಆರೋಗ್ಯಾಧಿಕಾರಿ ಕರೆಸಿ ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ವಿರೋಧ ಪಕ್ಷದ ಸದಸ್ಯರಲ್ಲಿ ಓರ್ವರಾದ ಎಂ ವೆಂಕಟಪ್ಪ ಗೌಡ ಸಭೆಯ ಮುಂಭಾಗಕ್ಕೆ ಬಂದು ಟೇಬಲ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಉಳಿದ ವಿಪಕ್ಷ ಸದಸ್ಯರು ಇವರಿಗೆ ಸಾತ್ ನೀಡಿದರು.
ನಗರ ಪಂಚಾಯತ್ ಆಡಳಿತದ ವಿರುದ್ಧ ಘೋಷಣೆ, ಧಿಕ್ಕಾರ ಕೂಗಿದರು.ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭೆಯ ಮುಂಭಾಗಕ್ಕೆ ಬಂದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರುಗಳಾದ ಬೂಡು ರಾಧಾಕೃಷ್ಣ ಮತ್ತು ರೋಹಿತ್ ಕೈಗೊಡಿ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಪರಸ್ಪರ ವಾಗ್ವಾದ, ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರ ಮಧ್ಯೆ ಪರಸ್ಪರ ತಳ್ಳಾಟ, ಹೊಯ್ ಕೈ ನಡೆದು ಸಭೆ ವಿಕೋಪಕ್ಕೆ ತಲುಪಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಯಿತು.


ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷರು ಘಟನೆ ವಿಕೋಪಕ ತಿರುಗುವ ಸಾಧ್ಯತೆ ಕಂಡು ಬಂದಾಗ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಎಸ್‌ ಐ ದಿಲೀಪ್ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಸದಸ್ಯರನ್ನು ಸಮಾಧಾನ ಪಡಿಸಿದ ಪೊಲೀಸ್‌ ಅಧಿಕಾರಿಗಳು ನೂಕಾಟ, ತಳ್ಳಾಟ ನಡೆಸದಂತೆ ಸೂಚನೆ ನೀಡಿದರು.

ಬಳಿಕ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಿರೋಧ ಪಕ್ಷದ ಸದಸ್ಯರ ಜೊತೆ ಮಾತುಕತೆ ನಡೆಸಿದರು. ಮುಂದಿನ ಸಭೆಯ ಒಳಗೆ ಇಂಜಿನಿಯರ್, ಆರೋಗ್ಯಾಧಿಕಾರಿ ನೇಮಕ ಆಗಬೇಕು, ಸಭೆಗೆ ಇಂಜಿನಿಯರ್, ಆರೋಗ್ಯಾಧಿಕಾರಿ ಕರೆಸಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು. ಮುಂದಿನ ಸಭೆಗೆ ಅಧಿಕಾರಿಗಳನ್ನು ಕರೆಸುತ್ತೇವೆ ಎಂದು ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು. ಬಳಿಕ ಸಭೆ ಮುಂದುವರಿಯಿತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!