ಕರಾವಳಿ

ಕಾಣಿಯೂರು: ಹಲ್ಲೆ ನಡೆಸಿದವರಿಗೆ ವ್ಯಾಪಾರಿಗಳು ಮುಸ್ಲಿಮರು ಎಂದು ಗೊತ್ತಿರಲಿಲ್ಲ-ಜಲೀಲ್ ಬೈತಡ್ಕಪುತ್ತೂರು: ಕಾಣಿಯೂರಿನಲ್ಲಿ ಇಬ್ಬರು ವ್ಯಾಪಾರಿಗಳ ಮೇಲೆ ನಡೆದ ಹಲ್ಲೆಯ ಬಳಿಕ ವಿವಿಧ ವದಂತಿಗಳು ಸೋಶಿಯಲ್ ಮೀಡಿಯಾ ಮೂಲಕ ಸಮಾಜದಲ್ಲಿ ಹಬ್ಬುತ್ತಿದ್ದು ಹಿಂದೂ-ಮುಸ್ಲಿಮರು ಕಾಣಿಯೂರಿನಲ್ಲಿ ಬದುಕಲು ಕಷ್ಟ ಎಂಬ ವದಂತಿ ಸತ್ಯಕ್ಕೆ ದೂರವಾದ ವಿಷಯವಾಗಿದೆ. ಕಾಣಿಯೂರು ಭಾಗದಲ್ಲಿ ನಾವೆಲ್ಲರೂ ಒಟ್ಟಾಗಿ ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಡಬ ತಾಲೂಕು ಅಧ್ಯಕ್ಷ ಅಬ್ದುಲ್ ಜಲೀಲ್ ಬೈತಡ್ಕ ಹೇಳಿದರು.

ಕಾಣಿಯೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೊನ್ನೆ ನಡೆದ ಮಾನಭಂಗ ಯತ್ನ ಮತ್ತು ನಂತರ ನಡೆದ ಹಲ್ಲೆ ಪ್ರಕರಣ ಈ ಎರಡೂ ಘಟನೆಯನ್ನು ನಾವು ಖಂಡಿಸುತ್ತೇವೆ, ಹಲ್ಲೆ ಘಟನೆಗೆ ಸಂಬಂಧಿಸಿ ಈಗಾಗಲೇ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ, ಪೋಲಿಸ್ ಇಲಾಖೆ ಮೇಲೆ ನಂಬಿಕೆ ಇದೆ. ಪೊಲೀಸರು ಬೇಕಾದ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಇನ್ನು ಇಂತಹ ಘಟನೆ ಮರುಕಳಿಸಬಾರದು ಎಂದು ಅವರು ಹೇಳಿದರು.

ಕಾಣಿಯೂರು ಭಾಗದಲ್ಲಿ ಎಲ್ಲಾ ಜಾತಿ ಧರ್ಮದವರು ವ್ಯಾಪಾರವನ್ನು ನಡೆಸುತ್ತಾ ಹಲವು ವರ್ಷಗಳಿಂದ ಅನೋನ್ಯವಾಗಿದ್ದೇವೆ. ಇಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧಭಾವ ಇಲ್ಲ, ಇಲ್ಲಿ ನಾವೆಲ್ಲಾ ಒಟ್ಟಾಗಿ ಜೀವಿಸುತ್ತಿದ್ದೇವೆ ಎಂದು ಅವರು ಹೇಳಿದರು.

ನಾನು ಬೇರೆ ವಿಚಾರವೊಂದಕ್ಕೆ ಸಂಬಂಧಪಟ್ಟು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕರಿಗೆ ಕರೆ ಮಾಡಿದಾಗ ಯಾರೋ ಕಳ್ಳರು ಬಂದಿದ್ದಾರೆ, ಅಲ್ಲಿಗೆ ನಾನು ಹೋಗುತ್ತಿದ್ದೇನೆ ಎಂದರು. ನಂತರ 15 ನಿಮಿಷ ಬಿಟ್ಟು ಮತ್ತೆ ಗಣೇಶರಿಗೆ ಕರೆ ಮಾಡಿದಾಗ ಅವರು ಅಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಲ್ಲದೇ ‘ಯಾರೋ ಕಳ್ಳರು ಇದ್ದಾರೆ ನಾನು ಅಲ್ಲಿಗೆ ಹೋಗುವಾಗ ಘಟನೆ ಆಗಿದೆ ಎಂದರು. ಆಗ ‘ನಮ್ಮವರಾ, ಮುಸಲ್ಮಾನರಾ ಎಂದು ನಾನು ಅವರಲ್ಲಿ ಕೇಳಿದೆ ಆಗ ಅಲ್ಲ, ಯಾರೋ ಮಾರ್ವಾಡಿ ತರ ಕಾಣ್ತಾರೆ ಎಂದು ಅವರು ಹೇಳಿದರು. ಹಾಗಾಗಿ ಹೊಡೆಯುವವರಿಗೆ ಅವರು ಮುಸ್ಲಿಂ ಅಂತ ಗೊತ್ತಿರಲಿಲ್ಲ ಎಂದು ಜಲೀಲ್ ಬೈತಡ್ಕ ವಿವರಿಸಿದರು.

ಕಾಣಿಯೂರು ಜನರಿಂದಾಗಲೀ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಾಕ್ಷರಿಂದ ಇದುವರೆಗೆ ಯಾವುದೇ ತೊಂದರೆ ಆಗಿಲ್ಲ. ನಾವು ಮುಂದಕ್ಕೆ ಒಟ್ಟಾಗಿಯೇ ವ್ಯಾಪಾರ ವ್ಯವಹಾರಗಳನ್ನು ಮಾಡಿಕೊಂಡು ಮುಂದುವರಿಯಲಿದ್ದೇವೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶ ಮಾದರಿ ಸತ್ಯಕ್ಕೆ ದೂರ: ಅಡಿಕೆ ವ್ಯಾಪಾರಿ ಸಮೀರ್ ಎ.ಟಿ.ಸಿ ಮಾತನಾಡಿ ಹೊರಗಡೆ ಪ್ರಚಾರ ಆದ ರೀತಿ ಕಾಣಿಯೂರಿನಲ್ಲಿ ಪರಿಸ್ಥಿತಿ ಇಲ್ಲ. ನಾವೂ ಕಾಣಿಯೂರಿನಲ್ಲಿ ವ್ಯಾಪಾರ ಮಾಡುವುದು ಬಹಳ ವರ್ಷವಾಯಿತು, ಸೋಷಿಯಲ್ ಮಿಡಿಯಾದಲ್ಲಿ ಬಂದತಹ ಉತ್ತರಪ್ರದೇಶ ಮಾದರಿಯ ಹಾಗೆ ಕಾಣಿಯೂರಿನಲ್ಲಿ ನಡೆಯುತ್ತಾ ಇದೆ ಎನ್ನುವುದು ಸತ್ಯಕ್ಕೆ ದೂರದ ಮಾತು. ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪರವಾಗಲೀ, ವಾಹನಗಳ ಬಾಡಿಗೆ, ಮೀನಿನ ಮಾರ್ಕೆಟ್ ವ್ಯಾಪಾರಸ್ಥರಿಗೆ ಇಲ್ಲಿ ಯಾವುದೇ ರೀತಿಯ ತೊಂದರೆಗಳಿಲ್ಲ. ಇಲ್ಲಿ ನಮ್ಮ ವರ್ತಕ ಸಂಘದ ಅಧ್ಯಕ್ಷರಾಗಿ, ಆಟೋ ಚಾಲಕ ಸಂಘದ ಅಧ್ಯಕ್ಷರಾಗಿಯು ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರೇ ಕಾರ್ಯನಿರ್ವಹಿಸುತ್ತಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಅವರು ಹೇಳಿದರು.

ಹಿಂದೂ-ಮುಸ್ಲಿಂ ಬೇಧಭಾವ ಇಲ್ಲ: ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ ಕ್ಲಬ್‌ನ ಸದಸ್ಯ ಮಜೀದ್ ಬೆದ್ರಾಜೆ ಮಾತನಾಡಿ ನಾವು ಎಲ್ಲಾ ಜಾತಿ, ಧರ್ಮದವರು ಸೇರಿ ಕಾಣಿಯೂರಿಗೆ ಅಗತ್ಯವಿರುವ ಅಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ್ದೇವೆ. ಹೊರಗೆ ಕಾಣುವ ರೀತಿ ಕಾಣಿಯೂರು ಇಲ್ಲ. ನಮ್ಮಲ್ಲಿ ಒಗ್ಗಟ್ಟಿದೆ, ಸೌಹಾರ್ದತೆ ಇದೆ. ಹಿಂದೂ-ಮುಸ್ಲಿಂ ಬೇಧಭಾವ ಇಲ್ಲ. ಮೊನ್ನೆಯ ಘಟನೆಯನ್ನು ಖಂಡಿಸುತ್ತೇವೆ, ಮುಂದಕ್ಕೆ ಆ ರೀತಿಯ ಘಟನೆ ಆಗಬಾರದು ಎಂದು ಅವರು ಹೇಳಿದರು.

ಹಿರಿಯ ಅಡಿಕೆ ವ್ಯಾಪಾರಿ ಮಹಮ್ಮದ್ ಇಕ್ಬಾಲ್ ಮಾತನಾಡಿ ನಾನು 40 ವರ್ಷಗಳಿಂದ ಕಾಣಿಯೂರಿನಲ್ಲಿ ಅಡಿಕೆ ವ್ಯಾಪರ ಮಾಡುತ್ತಾ ಬಂದಿದ್ದೇನೆ, ಹಲವು ಹಿಂದೂ ಕುಟುಂಬದೊಂದಿಗೆ ಆತ್ಮೀಯರಾಗಿದ್ದೇವೆ, ನಮ್ಮಲ್ಲಿ ಬೇಧಭಾವ ಇಲ್ಲ ಎಂದು ಹೇಳಿದರು.

ಆಟೋ ರಿಕ್ಷಾ ಚಾಲಕ ಅಸ್ಪದ್ ಮಾತನಾಡಿ ನಾನು ಕಾಣಿಯೂರಿನಲ್ಲಿ ಏಳು ವರ್ಷಗಳಿಂದ ಆಟೋ ಚಾಲಕನಾಗಿ ದುಡಿಯುತ್ತಿದ್ದು ಕಾಣಿಯೂರು ಭಾಗದ ವಿವಿಧ ಕಡೆಗಳಿಗೆ ಬಾಡಿಗೆ ಹೋಗುತ್ತಿದ್ದು ನನಗೆ ಯಾವುದೇ ರೀತಿಯ ಸಮಸ್ಯೆ ಇದುವರೆಗೆ ಆಗಿಲ್ಲ. ಮೊನ್ನೆ ಹಲ್ಲೆ ನಡೆದ ಸಂದರ್ಭ ಗಾಯಾಳುಗಳನ್ನು ನಾನು ಮತ್ತು ಇನ್ನೊಬ್ಬ ಹಿಂದೂ ಸಹೋದರ ಸೇರಿ ಆಂಬ್ಯಲೆನ್ಸ್‌ನಲ್ಲಿ ಕಡಬಕ್ಕೆ ಕರೆದುಕೊಂಡು ಹೋಗಿದ್ದು ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಉದನಡ್ಕ ನಮ್ಮನ್ನು ಆಸ್ಪತ್ರೆಗೆ ಕಳುಹಿಸಿದ್ದು ಎಂದು ಅಸ್ಪದ್ ಹೇಳಿದರು.

ವ್ಯಾಪಾರಿ ಹನೀಫ್ ಮಾತನಾಡಿ ಈ ಹಿಂದಿನ ಘಟನೆಯೊಂದನ್ನು ನನಗೆ ಬಗೆಹರಿಸಿಕೊಟ್ಟವರೇ ಗಣೇಶ್ ಆಗಿದ್ದು ನಮ್ಮೊಳಗಿನ ಪ್ರೀತಿ, ವಿಶ್ವಾಸ ಇಂದಿಗೂ ಹಾಗೆಯೇ ಇದೆ ಎಂದು ಹೇಳಿದರು.

ಅಶ್ರಫ್ ಅಬ್ಬಡ ಮಾತನಾಡಿ ಗಣೇಶ್ ಉದನಡ್ಕ ಅವರು ಅಬ್ಬಡ ನಿವಾಸಿಗಳಿಗೆ 9 ಕುಟುಂಬಗಳಿಗೆ ಗ್ರಾ.ಪಂನಿಂದ ನಿವೇಶನ ಒದಗಿಸಿಕೊಟ್ಟಿದ್ದಾರೆ. ನಮ್ಮ ಕರೆಗೆ ತಕ್ಷಣ ಸ್ಪಂದನೆ ಕೊಡುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವ್ಯಾಪಾರಿಗಳಾದ ಸತ್ತಾರ್ ಕಾಣಿಯೂರು, ಶಾಫಿ, ಫಝಲ್ ಬಾಂತೈ, ಶಾಫಿ ಬೈತಡ್ಕ, ನಝೀರ್ ಕಾಯ್ಮಣ, ಅಬ್ದುಲ್ಲ ಬೈತಡ್ಕ, ಹಾರಿಸ್ ಕಲ್ಪಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!