ಕರಾವಳಿಕ್ರೀಡೆರಾಜ್ಯ

ಬೆಂಗಳೂರು ಕಂಬಳ; ಶಾಸಕರ ನೇತೃತ್ವದಲ್ಲಿ ಸಭೆ
ತುಳು ಸಂಘಸಂಸ್ಥೆಗಳಿಗೆ ವಿವಿಧ ಜವಾಬ್ದಾರಿ: ಅಶೋಕ್ ರೈ


ಪುತ್ತೂರು: ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯು ಬೆಂಗಳೂರಿನ ಸ್ವಾತಿ ಹೊಟೇಲ್ ಸಭಾಂಗಣದಲ್ಲಿ ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಸೆ.6 ರಂದು ನಡೆಯಿತು.


ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ತುಳುನಾಡಿನ ಜನಪದ ಕಲೆಯಾಗಿರುವ ಕಂಬಳವು ಈ ಬಾರಿ ಅದ್ದೂರಿಯಾಗಿ ಅನೇಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಾಗೂ ತುಳುನಾಡಿನ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು.

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೆಂಗಳೂರಿನ ಮಹಾಜನತೆ ಸೇರಿದಂತೆ ತುಳುನಾಡಿನ ಮಂದಿ ಈ ಕಂಬಳಕ್ಕೆ ಸಾಕ್ಷಿಯಾಗಲಿದ್ದಾರೆ. ಸಭೆಯಲ್ಲಿ 40ಕ್ಕೂ ಮಿಕ್ಕಿ ಬೆಂಗಳೂರಿನಲ್ಲಿರುವ ತುಳು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಕಂಬಳಕ್ಕೆ ಅಭೂತಪೂರ್ವ ಬೆಂಬಲವೂ ವ್ಯಕ್ತವಾಗಿದ್ದು ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇರುವ ಕಾರಣ ಮಾಡಿಕೊಳ್ಳಬೇಕಾದ ವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.


ಸಭೆಯಲ್ಲಿ ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷರಾದ ಡಾ. ಕೆ ಸಿ ಬಲ್ಲಾಲ್, ದ ಕ ವಿಶ್ವಬ್ರಾಹ್ಮಣರ ಸಂಘದ ಅಧ್ಯಕ್ಷರಾದ ತುಕರಾಂ ಆಚಾರ್ಯ, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷರಾದ ಡಾ. ಜಗದೀಶ್, ಬೆಂಗಳೂರು ಬಿಲ್ಲವ ಸಂಘ ಯೂತ್ ವಿಂಗ್ ಅಧ್ಯಕ್ಷರಾದ ಶಿವುಸಾಲ್ಯಾನ್, ಜಿಎಸ್‌ಬಿ ಸಂಘದ ಅಧ್ಯಕ್ಷರಾದ ದಿನಕರ ಕಾಮತ್, ಕುಲಾಲ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಚಂಡ್ಲ, ಸ್ಥಳೀಯ ಕಾರ್ಪೋರೇಟರ್‌ಗಳಾದ ರಾಜೇಂದ್ರ ಕುಮಾರ್, ಸಂಪತ್, ಉಮೇಶ್ ಶೆಟ್ಟಿ, ಮಾಜಿ ಡೆಪ್ಯುಟಿ ಮೇಯರ್ ಹರೀಶ್ ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ಸುಂದರ ರಾಜ್ ಸ್ವಾಗತಿಸಿದರು.ಕಾರ್ಯದರ್ಶಿ ಅಜಿತ್ ಹೆಗ್ಡೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!