ದೀಪಾವಳಿ ಪಟಾಕಿ: ಸುಪ್ರೀಂ ಕೋರ್ಟು ಆದೇಶ ಪಾಲಿಸುವಂತೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಅ.24ರಿಂದ 26ರ ತನಕ ಆಚರಣೆ ಮಾಡಲಾಗುತ್ತಿದ್ದು, ಹಬ್ಬದ ವೇಳೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮಂಡಳಿ ಪತ್ರ ಬರೆದಿದೆ.

‘ರಾತ್ರಿ 8ರಿಂದ ರಾತ್ರಿ 10ರ ಒಳಗಾಗಿ ಪಟಾಕಿ ಸಿಡಿಸಬೇಕು. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಹಸಿರು ಪಟಾಕಿ ಹೊರತುಪಡಿಸಿ ಉಳಿದ ಎಲ್ಲ ಮಾದರಿ ಪಟಾಕಿಗಳ ಬಳಕೆ, ಮಾರಾಟ ನಿಷೇಧಿಸಲಾಗಿದೆ’ ಎಂದು ಸೂಚಿಸಿದೆ.
‘ಶಬ್ದ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್‌ನ ನಿರ್ದೇಶನ ಪಾಲಿಸುವಂತೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಘನ ತ್ಯಾಜ್ಯ ವಿಲೇವಾರಿಗೂ ಕ್ರಮ ಕೈಗೊಳ್ಳಬೇಕು’ ಎಂದು ಮಂಡಳಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.