ತುಳು ಭಾಷೆಗೆ ಮಾನ್ಯತೆ: ತುಳುನಾಡಿನ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಚಾರ-ವೇದನಾಥ ಸುವರ್ಣ
ಪುತ್ತೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಮಾನ್ಯತೆಯಿರುವ ಭಾಷೆಯಾಗಿ ಸರಕಾರ ಘೋಷಿಸಿರುವುದು ನಮಗೆಲ್ಲಾ ಅತೀವ ಸಂತಸ ತಂದಿದ್ದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಇದಕ್ಕಾಗಿ ಹೋರಾಟ ನಡೆಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ತುಳು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದ್ದು ಇದು ಕೇವಲ ಒಂದು ಭಾಷೆಗೆ ಸಿಕ್ಕ ಗೌರವವಲ್ಲ, ತುಳು ಮಾತನಾಡುವ ಪ್ರತಿಯೊಬ್ಬರ ಅಸ್ತಿತ್ವ, ಸಂಸ್ಕೃತಿ ಮತ್ತು ಪರಂಪರೆಗೆ ಸಿಕ್ಕ ಗೌರವವಾಗಿದೆ ಎಂದು ದಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ ನರಿಮೊಗರು ತಿಳಿಸಿದ್ದಾರೆ.

ತುಳು ನಮ್ಮ ಭಾಷೆ ಮಾತ್ರವಲ್ಲ, ನಮ್ಮ ಮಣ್ಣಿನ ಸಂಸ್ಕೃತಿ, ಬದುಕಿನ ಪದ್ಧತಿ ಮತ್ತು ಭಾವನೆಗಳ ಪ್ರತಿಬಿಂಬ. ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಜನಪದ ಪರಂಪರೆ ಹಾಗೂ ವಿಶಿಷ್ಟವಾದ ಸಾಹಿತ್ಯವನ್ನು ಹೊಂದಿರುವ ತುಳು ಭಾಷೆಗೆ ದೊರೆತ ಮಾನ್ಯತೆ ತುಳುನಾಡಿನ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ. ಭಾಷೆಯ ಮಾನ್ಯತೆ ದೊರೆತಿರುವುದರ ಜೊತೆಗೆ ಅದರ ಉಳಿವು ಮತ್ತು ಬೆಳವಣಿಗೆಯ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ತುಳು ಸಾಹಿತ್ಯ, ಕಲೆ, ನಾಟಕ, ಸಿನಿಮಾ ಹಾಗೂ ಜನಪದ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಮುಂದಿನ ಪೀಳಿಗೆಗೂ ತುಳುವಿನ ಸೊಗಡನ್ನು ತಲುಪಿಸುವುದು ನಮ್ಮ ಕರ್ತವ್ಯವಾಗಿದ್ದು ತುಳುನಾಡಿನ ಮಣ್ಣಿನ ಸೊಗಡನ್ನು ಹೊತ್ತಿರುವ ನಮ್ಮ ತುಳು ಭಾಷೆ ಮುಂದಿನ ಪೀಳಿಗೆಗಳಲ್ಲೂ ಇದೇ ಹೆಮ್ಮೆಯಿಂದ ಮೊಳಗಲಿ ಎಂದು ಆಶಿಸುತ್ತೇನೆ ಎಂದು ವೇದನಾಥ ಸುವರ್ಣ ತಿಳಿಸಿದ್ದಾರೆ.


