ಪೊಲೀಸ್ ಸಿಬ್ಬಂದಿಗೆ ಹಲ್ಲೆ: ಮೂವರ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 4ರಂದು ರಾತ್ರಿ ಪುತ್ತೂರು ಗ್ರಾಮಾಂತರ ಠಾಣೆಯ ಹೆಚ್ಸಿ ಮಧು ಹಾಗೂ ಸಿಪಿಸಿ ಭೀಮನ ಗೌಡ ಎಂ. ಬಿರಾದರ್ ಅವರು ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಂದ ದೂರಿನ ಮೇರೆಗೆ ಪುತ್ತೂರು ಪಡ್ನೂರು ಗ್ರಾಮದ ಮುಂಡಾಜೆ ಎಂಬಲ್ಲಿಗೆ ತೆರಳಿದ್ದರು.
ಸ್ಥಳಕ್ಕೆ ತೆರಳಿದಾಗ ಮಹಿಳೆಯೊಬ್ಬರು ತನ್ನ ಪತಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನವೀನ್ ಎಂಬವರ ಬಳಿ ವಿಚಾರಣೆ ನಡೆಸುತ್ತಿದ್ದಾಗ, ಆತ ಕೋಪಗೊಂಡು ತನ್ನ ಪತ್ನಿಗೆ ಮತ್ತೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಪೊಲೀಸರು ತಡೆಯಲು ಮುಂದಾದಾಗ ನವೀನ್, ಆತನ ತಾಯಿ ಹಾಗೂ ಸಹೋದರ ಸೇರಿಕೊಂಡು ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2026ರಂತೆ ಬಿ.ಎನ್.ಎಸ್. 2023ರ ಕಲಂ 352, 132, 121(1) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಕರಣದ ಆರೋಪಿ ನವೀನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪೂರ್ಣಗೊಂಡು ಬಿಡುಗಡೆಯಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


