ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ‘ಗ್ಲೋ–26’ ಆರ್ಟ್ಸ್ ಫೆಸ್ಟ್ ಲೋಗೋ ಅನಾವರಣ
ಪುತ್ತೂರು: ಸಾಲ್ಮರದ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಾರ್ಷಿಕ ಕಲೋತ್ಸವ ‘ಗ್ಲೋ–26’ ಲೋಗೋ ಅನಾವರಣ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ವಿದ್ಯಾರ್ಥಿನಿಯರೇ ವಿನ್ಯಾಸಗೊಳಿಸಿದ, ಸಂಸ್ಥೆಯ ದಶಮಾನೋತ್ಸವ ಹಾಗೂ ವಾರ್ಷಿಕ ಆರ್ಟ್ಸ್ ಫೆಸ್ಟ್‌ನ ಪರಿಕಲ್ಪನೆಯನ್ನು ಒಳಗೊಂಡ ‘ಗ್ಲೋ–26’ ಲೋಗೋವನ್ನು ವಾಗ್ಮಿ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಹಾಗೂ ಉದ್ಯಮಿಗಳಾದ ಸುಲೈಮಾನ್ ಹಾಜಿ ಬೈತಡ್ಕ ಮತ್ತು ಇರ್ಶಾದ್ ಇಂಜಿನಿಯರ್ ವಿಟ್ಲ ಅವರು ಜಂಟಿಯಾಗಿ ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿ ಪಡೀಲ್, ಶಿಕ್ಷಣದ ಜೊತೆಗೆ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಸಾಬ್ ಹಾಜಿ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಸಮನ್ವಯದೊಂದಿಗೆ ಪ್ರತಿಭೆ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿನಿಯರು ವೈಯಕ್ತಿಕ ಸಾಧನೆಯ ಜೊತೆಗೆ ಕುಟುಂಬದಲ್ಲಿ ಮೌಲ್ಯ, ಜ್ಞಾನ ಮತ್ತು ಕೌಶಲಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದರು. ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಮಾತನಾಡಿ, ವಿದ್ಯೆಯ ಮಾರ್ಗದಲ್ಲಿ ವ್ಯಯಿಸುವ ಸಂಪತ್ತು ಪಾರತ್ರಿಕ ವಿಜಯಕ್ಕಿರುವ ದಾರಿಯಾಗಿದ್ದು, ಶಿಕ್ಷಣಕ್ಕೆ ನೀಡುವ ಪ್ರತಿಯೊಂದು ಕೊಡುಗೆಯೂ ಅಮೂಲ್ಯ ವಾದುದು ಎಂದರು. ಉದ್ಯಮಿ ಸುಲೈಮಾನ್ ಹಾಜಿ ಬೈತಡ್ಕ ಮಾತನಾಡಿ, ವಿದ್ಯಾರ್ಥಿನಿಯರ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಅವರ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರ್ಯಕ್ರಮಗಳು ಮಹತ್ವದ ಕೊಡುಗೆ ನೀಡುತ್ತವೆ. ವಿದ್ಯಾರ್ಥಿನಿಯರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಸಂಸ್ಥೆಯ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ ಮಾತನಾಡಿ, ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸಮನ್ವಯ ಶಿಕ್ಷಣದ ಜೊತೆಗೆ ವಿವಿಧ ಪ್ರತಿಭಾ ಕಾರ್ಯಕ್ರಮಗಳ ಮೂಲಕ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಮೌಂಟನ್ ವ್ಯೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಶ್ರಫ್, ಕಾರ್ಯಾಲಯ ನಿರ್ವಾಹಕ ಯೂಸುಫ್, ಹಮೀದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶಾಲಾ ಶಿಕ್ಷಕ ರವೂಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರಾರ್ಥನಾ ಸಂಗಮ:
ಸಭಾ ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ಮೀಲಾದ್ ಪ್ರಯುಕ್ತ ಮೌಲಿದ್ ಹಾಗೂ ವಿಶೇಷ ಪ್ರಾರ್ಥನಾ ಸಂಗಮ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದರು.


