ದೇವಸ್ಥಾನದ ಫೈಲ್ ಕಳುಹಿಸುವ ತಾಕತ್ತಿಲ್ಲದವರು ನನ್ನ ತಿಳುವಳಿಕೆಯ ಬಗ್ಗೆ ಮಾತನಾಡ್ತಾರೆ:
ಮಾಜಿ ಶಾಸಕ ಮಠಂದೂರು ಕಾಲೆಳೆದ ಶಾಸಕ ಅಶೋಕ್ ರೈ
ಪುತ್ತೂರು; ಶಾಸಕನಾಗಿ ನಾನು ಒಂದು ತಿಂಗಳು ಕಳೆದಿದೆ ಅಷ್ಟೆ. ಕೃಷಿ ವಿಮಾ ಯೋಜನೆಯ ಬಗ್ಗೆ ಮಾತನಾಡುವಾಗ ಶಬ್ದದಲ್ಲಿ ಎಡವಿರಬಹುದು ಅದನ್ನೇ ದೊಡ್ಡದು ಮಾಡಿ ಪುತ್ತೂರಿನ ಮಾಜಿ ಶಾಸಕರು, ಪುತ್ತೂರಿನ ಶಾಸಕರಿಗೆ ತಿಳುವಳಿಕೆ ಇಲ್ಲ, ರೈತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರಿಗೆ ಪುತ್ತೂರು ಕ್ಷೇತ್ರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಶಾಸಕರಾದ ಅಶೋಕ್ ರೈ ಮಾಜಿ ಶಾಸಕರ ಕಾಲೆಳೆದಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ರಚಿಸಲಾದ ಮಾಸ್ಟರ್ ಪ್ಲಾನ್ ಫೈಲನ್ನು ಸಂಬಂಧಿಸಿದ ಇಲಾಖೆಗೆ ತಲುಪಿಸುವ ತಾಕತ್ತಿಲ್ಲದ ಅವರು ಯುವಕರನ್ನು ಎತ್ತಿಕಟ್ಟಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಹಿಂದುತ್ವ ಹಿಂದುತ್ವ ಎಂದು ಬೊಬ್ಬೆ ಹಾಕುವ ಇವರಿಗೆ ಪುತ್ತೂರು ಸೀಮೆಯ ದೇವಸ್ಥಾನದ ಕಡತವನ್ನು ಇಲಾಖೆಗೆ ಅಥವಾ ಸರಕಾರಕ್ಕೆ ತಲುಪಿಸುವ ತಾಕತ್ತಿಲ್ಲ ಎಂದು ಲೇವಡಿ ಮಾಡಿದರು.
ನಾನು ಶಾಸಕನಾದ ಬಳಿಕ ದೇವಳದ ಫೈಲನ್ನು ಇಲಾಖೆಗೆ ತಲುಪಿಸಿ ಮಾಡಿರುವ ಮಾಸ್ಟರ್ ಪ್ಲಾನ್ ಪ್ರಕಾರ ದೇವಳದಲ್ಲಿ ಅಭಿವೃದ್ದಿ ಕಾರ್ಯ ಮಾಡಿ ಎಂದು ಸಂಬಂದಿಸಿದವರಿಗೆ ಕೇಳಿಕೊಂಡಿದ್ದೇನೆ.
ನನ್ನನ್ನು ಕೆಣಕುವುದು ಬೇಡ. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ, ಪ್ರೀತಿಯ ರಾಜಕಾರಣ ಮಾಡುತ್ತೇನೆ, ಇದುವರೆಗೂ ಯಾವ ರಾಜಕೀಯ ಮುಖಂಡರ ಬಗ್ಗೆ ಮಾತನಾಡಿಲ್ಲ ಆದರೆ ಸುಮ್ಮನೆ ಕಾಲೆಳೆದರೆ ಮಾತನಾಡ್ಲಿಕ್ಕೆ ನನಗೂ ಗೊತ್ತಿದೆ. ಪುತ್ತೂರಿನ ಮಾಜಿ ಶಾಸಕರು ಏನು ಸಾಧನೆ ಮಾಡಿದ್ದಾರೆ ಎಂದು ಕೊನೇ ಗಳಿಗೆಯಲ್ಲಿ ಕ್ಷೇತ್ರದ ಜನರಿಗೆ ಗೊತ್ತಾಗಿದೆ. ಇದುವರೆಗೆ ಯಾವ ಶಾಸಕರೂ ಮಾಡದ ಸಾಧನೆಯನ್ನು ಅವರು ಮಾಡಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಅವರ ಸಾಧನೆಯನ್ನು ಜನ ನೋಡಿದ್ದಾರೆ, ಇಂತಹ ಸಾಧನೆಯನ್ನು ಶಾಸಕರು ಮಾಡಿದ್ದಾರಲ್ವ ಎಂದು ಬೆಚ್ಚಿ ಬಿದ್ದಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಮಾಡ್ಲಿಕ್ಕೆ ಸಾಕಷ್ಟು ಕೆಲಸವಿತ್ತು ಅವರದ್ದೇ ಸರಕಾರವಿತ್ತು ಯಾಕೆ ಮಾಡ್ಲಿಲ್ಲ ಎಂದು ಪ್ರಶ್ನಿಸಿದ ಶಾಸಕರು ಇಂಥಹ ವಿಚಿತ್ರ ಸಾಧನೆಯನ್ನು ಮಾಡ್ಲಿಕ್ಕೆ ಹೋದರೆ ಅಭಿವೃದ್ದಿ ಮಾಡ್ಲಿಕ್ಕೆ ಎಲ್ಲಿ ಪರುಸೋತ್ತಿದೆ ಎಂದು ಮಾಜಿ ಶಾಸಕರ ಕಾಲೆಳೆದರು.