ಮಾದಕವಸ್ತು ಸೇವನೆ ಆರೋಪ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಸೇವಿಸಿ ಅಮಲಿನಲ್ಲಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಅವರು ಆಗಸ್ಟ್ 2ರಂದು ಸಂಜೆ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಳ್ತಂಗಡಿ ಪೊಟ್ಟುಕೆರೆ ಎಂಬಲ್ಲಿ ವ್ಯಕ್ತಿಯೊಬ್ಬರು ನಶೆಯ ಅಮಲಿನಲ್ಲಿರುವುದನ್ನು ಗಮನಿಸಿ ವಿಚಾರಿಸಿದ್ದಾರೆ.
ವಿಚಾರಣೆ ವೇಳೆ ಆತ ನಿಷೇಧಿತ ಮಾದಕವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಆತನನ್ನು ವಿಚಾರಿಸಿದಾಗ ಬೆಳ್ತಂಗಡಿ ನಿವಾಸಿ ಶ್ರೀರಾಜ್ ಶೆಟ್ಟಿ (36) ಎಂದು ತಿಳಿದುಬಂದಿದೆ.
ಆತನನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದಾಗ, ಮಾದಕವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



