ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 2 ವರ್ಷ 6 ತಿಂಗಳ ಜೈಲು ಶಿಕ್ಷೆ
ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ಎಫ್‌ಟಿಎಸ್‌ಸಿ–I ನ್ಯಾಯಾಲಯವು 2 ವರ್ಷ 6 ತಿಂಗಳ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ಆದೇಶಿಸಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಜೂನ್ 23ರಂದು ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಅ.ಕ್ರ. 79/2025ರಂತೆ ಪೋಕ್ಸೋ ಕಾಯ್ದೆ ಹಾಗೂ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಪಿಎಸ್‌ಐಗಳಾದ ಕೀರಪ್ಪ ಘಟಕಾಂಬಳೆ ಹಾಗೂ ಕೃಷ್ಣಕಾಂತ ಪಾಟೀಲ್ ಅವರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎಫ್‌ಟಿಎಸ್‌ಸಿ–I, ಮಂಗಳೂರು ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಜೆ.ಎಸ್. ಅವರು ಜುಲೈ 31, 2026ರಂದು ಆರೋಪಿಗೆ ವಿವಿಧ ಕಲಂಗಳಡಿ ಶಿಕ್ಷೆ ವಿಧಿಸಿದ್ದಾರೆ.
ಶಿಕ್ಷೆಯ ವಿವರ: * ಬಿಎನ್‌ಎಸ್ ಕಲಂ 74 r/w 62 ಅಡಿಯಲ್ಲಿ – 2 ವರ್ಷ 6 ತಿಂಗಳ ಶಿಕ್ಷೆ ಹಾಗೂ ₹15,000 ದಂಡ.
* ಬಿಎನ್‌ಎಸ್ ಕಲಂ 75(2)(3) r/w 62 ಅಡಿಯಲ್ಲಿ – 1 ವರ್ಷ ಶಿಕ್ಷೆ ಹಾಗೂ ₹10,000 ದಂಡ.
* ಬಿಎನ್‌ಎಸ್ ಕಲಂ 79 ಅಡಿಯಲ್ಲಿ – 1 ವರ್ಷ ಶಿಕ್ಷೆ ಹಾಗೂ ₹5,000 ದಂಡ.
* ಪೋಕ್ಸೋ ಕಾಯ್ದೆ ಕಲಂ 12 r/w 18 ಅಡಿಯಲ್ಲಿ – 1 ವರ್ಷ ಶಿಕ್ಷೆ ಹಾಗೂ ₹10,000 ದಂಡ.
ಎಲ್ಲಾ ಶಿಕ್ಷೆಗಳನ್ನು ಏಕಕಾಲದಲ್ಲಿ (concurrently) ಅನುಭವಿಸುವಂತೆ ಆದೇಶಿಸಲಾಗಿದ್ದು, ಒಟ್ಟು 2 ವರ್ಷ 6 ತಿಂಗಳ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಲಾಗಿದೆ.
ಸರ್ಕಾರಿ ಅಭಿಯೋಜಕಿ ಸಹನಾದೇವಿ ಅವರು ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.



