ರಾಷ್ಟ್ರೀಯ

ಕೇಸರಿ ಭದ್ರಕೋಟೆ ಉಳಿಸಿಕೊಳ್ಳಲು ಬಿಜೆಪಿ ಯತ್ನ | ಮೋದಿ, ಅಮಿತ್ ಶಾ ಮುಂದಾಳತ್ವದ ಫ್ಯ್ಲಾನ್ ಹೇಗಿದೆ?

ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಶೀಘ್ರದಲ್ಲೇ ಗುಜರಾತ್‌ ವಿಧಾನಸಭೆಗೂ ಚುನಾವಣೆ ಘೋಷಣೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ನಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಭದ್ರಕೋಟೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಹಿಸಿಕೊಂಡಿದ್ದಾರೆ.

ಚುನಾವಣಾ ಆಯೋಗ ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ, ಪ್ರಧಾನಿಯವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸಭೆ ನಡೆಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಸೇರಿದಂತೆ ಗುಜರಾತ್ ಮತ್ತು ಹಿಮಾಚಲದ ಬಿಜೆಪಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಈ ಸಭೆ ಗುಜರಾತ್ ಚುನಾವಣೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಸುಮಾರು 5 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಗುಜರಾತ್‌ನ ಗದ್ದುಗೆ ಉಳಿಸಿಕೊಳ್ಳುವ ತಂತ್ರವನ್ನು ಸಿದ್ಧಪಡಿಸಲಾಗಿದೆ. ಪ್ರಧಾನಿ ಮೋದಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ನಂಬಲಾಗಿದೆ. ಅಲ್ಲದೆ ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಯೋಜನೆಯ ಸಂಪೂರ್ಣ ರೂಪುರೇಷೆ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ಚುನಾವಣೆ ಘೋಷಣೆಗೂ ಮುನ್ನ ಮೋದಿ, ಅಮಿತ್ ಶಾರಿಂದ ಹಲವು ಯೋಜನೆ ಘೋಷಣೆ
ದೀಪಾವಳಿ ನಂತರ ಗುಜರಾತ್ ಚುನಾವಣೆಯನ್ನು ಚುನಾವಣಾ ಆಯೋಗ ಪ್ರಕಟಿಸುವ ಸಾಧ್ಯತೆ ಇದೆ. ಇದಕ್ಕು ಮುನ್ನ ಮೋದಿ ಮತ್ತು ಅಮಿತಾ ಶಾ ರಾಜ್ಯಕ್ಕೆ ಹಲವು ದೊಡ್ಡ ಕೊಡುಗೆಗಳನ್ನು ನೀಡಬಹುದು. ಅಕ್ಟೋಬರ್ 18 ರಿಂದ ಅಕ್ಟೋಬರ್ 22 ರವರೆಗೆ ಗುಜರಾತ್‌ನ ಗಾಂಧಿನಗರದಲ್ಲಿ ನಡೆಯಲಿರುವ ಡಿಫೆನ್ಸ್ ಎಕ್ಸ್‌ಪೋವನ್ನು ಅಕ್ಟೋಬರ್ 19 ರಂದು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಈ ಎಕ್ಸ್‌ಪೋದಲ್ಲಿ 1.25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗಾಗಿ 400ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಲು ಸರ್ಕಾರ ಮುಂದಾಗಿದೆ. ಇದಲ್ಲದೆ, ಗುಜರಾತ್‌ನಲ್ಲಿ ದೀಪಾವಳಿಯ ಆಸುಪಾಸಿನಲ್ಲಿ ಅನೇಕ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸವೂ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!