ವಿಟ್ಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ; ಇಬ್ಬರ ಬಂಧನ
ವಿಟ್ಲ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕೋಳಿ ಅಂಕ (ಜೂಜಾಟ) ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮೇ 30ರ ರಾತ್ರಿ ನಡೆದಿದೆ.

ಬಂಟ್ವಾಳ ತಾಲೂಕಿನ ಪುಣಚ ನಿವಾಸಿಗಳಾದ ದಿವಾಕರ ಪೂಜಾರಿ (46) ಮತ್ತು ಯಶ್ವಂತ್ (34) ಬಂಧಿತ ಆರೋಪಿಗಳಾಗಿದ್ದಾರೆ.
ಪರಿಯಾಲ್ತಡ್ಕ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕಾನೂನುಬಾಹಿರವಾಗಿ ಕೋಳಿ ಅಂಕ ಜೂಜಾಟ ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರಾಮಕೃಷ್ಣ ಅವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಪ ನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಳಿಯ ಸಂದರ್ಭದಲ್ಲಿ ಪೊಲೀಸರು ಜೂಜಾಟಕ್ಕೆ ಬಳಸುತ್ತಿದ್ದ 4 ಅಂಕದ ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟುವ ಕತ್ತಿಗಳು (ಬಾಳು), ಇತರೆ ಪರಿಕರಗಳು ಹಾಗೂ ಪಣಕ್ಕಿಟ್ಟಿದ್ದ ರೂ. 4,145/- ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.






