ಮಸೀದಿಯ ಉಸ್ತಾದ್ ಗೆ ಬಕ್ರೀದ್ ದಿನದಂದು ದ್ವಿಚಕ್ರ ವಾಹನ ಉಡುಗೊರೆ ನೀಡಿದ ಜಮಾಅತರು!
ಪುತ್ತೂರು: ಮಸೀದಿಯ ಉಸ್ತಾದರೊಬ್ಬರಿಗೆ ಜಮಾಅತರು ಸೇರಿಕೊಂಡು ದ್ವಿಚಕ್ರ ವಾಹನ ಉಡುಗೊರೆ ನೀಡುವ ಮೂಲಕ ಉಸ್ತಾದರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಜಮಾಅತರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು ಇದು ಮಾದರಿ ಕಾರ್ಯ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಬೆಳಿಯೂರುಕಟ್ಟೆ ಅನ್ಸ್ವಾರಿಯ ಜುಮಾ ಮಸೀದಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮುಹಝ್ಝಿನ್ ಆಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ಮಜೀದ್ ಇಮ್ದಾದಿಯವರಿಗೆ ಜಮಾಅತ್ ವತಿಯಿಂದ ದ್ವಿಚಕ್ರ ವಾಹನ(ಸುಝುಕಿ ಆಕ್ಸಸ್) ಉಡುಗೊರೆಯಾಗಿ ನೀಡುವ ಮೂಲಕ ಅರ್ಥಪೂರ್ಣ ಬಕ್ರೀದ್ ಹಬ್ಬ ಆಚರಿಸಿಕೊಂಡಿದ್ದಾರೆ.

ಮಸೀದಿಯಿಂದ ವಿಟ್ಲದ ರಾಧುಕಟ್ಟೆಯಲ್ಲಿರುವ ತಮ್ಮ ಮನೆಗೆ ಹೋಗಲು ಗಂಟೆಗಟ್ಟಲೆ ಬಸ್ಸಿಗಾಗಿ ಕಾಯುತ್ತಿದ್ದ ಉಸ್ತಾದರ ಕಷ್ಟವನ್ನು ಅರಿತ ಜಮಾಅತರು ಅವರಿಗೊಂದು ದ್ವಿಚಕ್ರ ವಾಹನ ಕೊಡಿಸುವ ಬಗ್ಗೆ ಚರ್ಚಿಸಿ ಅದಕ್ಕಾಗಿ ಹಣ ಒಟ್ಟುಗೂಡಿಸಿ ದ್ವಿಚಕ್ರ ವಾಹನ ಖರೀದಿಸಿದ್ದಾರೆ.
ಈ ಮಾದರಿ ಕಾರ್ಯದ ಹಿಂದೆ ಅನ್ಸ್ವಾರಿಯ ಜುಮಾ ಮಸೀದಿಯ ಖತೀಬ್ ಹನೀಫ್ ಅಸ್ಲಮಿ ಸೊರಕೆಯವರ ಮಾರ್ಗದರ್ಶನವಿದ್ದು ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಕೀಂ ಮತ್ತು ಜಮಾಅತರು ಸೇರಿಕೊಂಡು ಸ್ಕೂಟಿ ಹಸ್ತಾಂತರಿಸಿದ್ದಾರೆ. ತಮ್ಮ ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಉಸ್ತಾದರೊಬ್ಬರ ಕಷ್ಟಕ್ಕೆ ನೆರವಾದ ಜಮಾಅತರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.






