ಶೇಕಮಲೆ ಜಮಾಅತರಿಂದ ಮಾನವೀಯತೆಯ ಬಕ್ರೀದ್
ಪುತ್ತೂರು: ಬಕ್ರೀದ್ ಹಬ್ಬದ ದಿನದಂದು ಶೇಕಮಲೆ ಜಮಾಅತ್ ನ ಮುಸ್ಲಿಂ ಬಾಂಧವರು ಮಾನವೀಯತೆ ಮೆರೆದು ಸುದ್ದಿಯಾಗಿದ್ದಾರೆ. ಬಕ್ರೀದ್ ಹಬ್ಬದ ದಿನದಂದು ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ವಿಶೇಷ ಈದ್ ನಮಾಜಿನಲ್ಲಿ ಭಾಗವಹಿಸಿ, ಬಳಿಕ ಕುಟುಂಬಸ್ಥರ ಮನೆಗೆ ಭೇಟಿ, ಶುಭಾಶಯ ವಿನಿಮಯ, ಹಬ್ಬದ ಊಟೋಪಚಾರ… ಒಟ್ಟಿನಲ್ಲಿ ಮುಸ್ಲಿಂ ಬಾಂಧವರಿಗೆ ಸಂಭ್ರಮ. ಆದರೆ ಒಳಮೊಗ್ರು ಗ್ರಾಮದ ಶೇಕಮಲೆ ಜಮಾಅತ್ ನ ಮುಸ್ಲಿಂ ಬಾಂಧವರು ಈ ಬಾರಿ ಬಕ್ರೀದ್ ಸಂಭ್ರಮಕ್ಕೆ ಹೆಚ್ಚು ಒತ್ತು ಕೊಡಲಿಲ್ಲ ಇದಕ್ಕೆ ಕಾರಣ, ಕುಂಬ್ರದ ಅಮೃತ ಕ್ಲಿನಿಕ್‌ನ ವೈದ್ಯರಾದ ವಿಶ್ವೇಶ್ವರ ಭಟ್ ಅವರ ಅನಾರೋಗ್ಯ. ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮತ್ತು ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟಪಡುತ್ತಿರುವ ವಿಘ್ನೇಶ್ವರ ಭಟ್ ರವರಿಗೆ ಹಣ ಸಂಗ್ರಹಿಸುವುದು ಮತ್ತು ವೈದ್ಯರಿಗಾಗಿ ಪ್ರಾರ್ಥನೆ ಮಾಡುವುದರಲ್ಲೇ ಹೆಚ್ಚು ಸಮಯ ಮೀಸಲಿಟ್ಟಿದ್ದರು.

ಕುಂಬ್ರದಲ್ಲಿ ಕಳೆದ ಹಲವು ವರ್ಷಗಳಿಂದ ಅಮೃತ ಕ್ಲಿನಿಕ್
ನಡೆಸುತ್ತಿರುವ ವಿಘ್ನೇಶ್ವರ ಭಟ್‌ರವರಿಗೆ ಇದ್ದಕ್ಕಿದ್ದಂತೆ ಕಾಯಿಲೆ ಕಾಣಿಸಿಕೊಂಡಿದೆ. ವೈದ್ಯ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಅವರಿಗೆ ಕಾಯಿಲೆ ಬದುಕನ್ನೇ ಬುಡಮೇಲು ಮಾಡಿದೆ. ಇದ್ದ ಹಣದಿಂದ ಚಿಕಿತ್ಸಾ ವೆಚ್ಚ ಭರಿಸಿದ್ದ ವೈದ್ಯರು ತನ್ನ ಬಳಿ ಇದ್ದ ಹಣ ಖಾಲಿಯಾದಾಗ ತಾವೇ ಸಾಮಾಜಿಕ ತಾಣದಲ್ಲಿ ಹಾಕಿ ಸಹಾಯಕ್ಕಾಗಿ ಕೈ ಚಾಚಿದ್ದರು. ಇದನ್ನು ಗಮನಿಸಿದ ಶೇಕಮಲೆ ಜಮಾತ್ ನವರು ತಕ್ಷಣ ಸ್ಪಂದಿಸಿದ್ದಲ್ಲದೇ ಮಸೀದಿಯಲ್ಲಿ ಒಟ್ಟು 58013 ರೂ ಕಲೆಕ್ಷನ್ ಮಾಡಿ ಅದನ್ನು ಬಕ್ರೀದ್ ದಿನ ಹಸ್ತಾಂತರ ಮಾಡಿದ್ದಾರೆ. ಮಾತ್ರವಲ್ಲದೆ ಅವರಿಗೆ ವಿಶೇಷ ಪ್ರಾರ್ಥನೆಯನ್ನು ಕೂಡ ಮಸೀದಿಯಲ್ಲಿ ನೆರವೇರಿಸಿದ್ದಾರೆ.
ಈ ಬಗ್ಗೆ ಶೇಕಮಲೆ ಜಮಾಅತ್ ಕಾರ್ಯದರ್ಶಿ ಎಸ್.ಪಿ ಬಶೀರ್ ಶೇಕಮಲೆ ಪ್ರತಿಕ್ರಿಯಿಸಿ ಒಬ್ಬರ ನೋವಿಗೆ ಸ್ಪಂದಿಸುವುದು ನಮ್ಮ ಧರ್ಮ, ನಮ್ಮೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರು ನೋವಿನಲ್ಲಿದ್ದಾಗ ಅವರಿಗೆ ಸಣ್ಣ ಮಟ್ಟಿನಲ್ಲಿ ನೆರವು ನೀಡಿದ್ದೇವೆ, ಮನುಷ್ಯರಾದ ನಾವು ಅನಾರೋಗ್ಯದಲ್ಲಿರುವ ವಿಘ್ನೇಶ್ವರ ಭಟ್‌ರವರ ನೋವಿಗೆ ಸ್ಪಂಧಿಸಿದ್ದೇವೆ ಹೊರತು ಇಲ್ಲಿ ಜಾತಿ, ಧರ್ಮ ಅದೆಲ್ಲ ಯಾವುದೂ ಬರುವುದಿಲ್ಲ, ಅವರಿಗಾಗಿ ಮಸೀದಿಯಲ್ಲಿ ಪ್ರಾರ್ಥನೆಯನ್ನೂ ಮಾಡಿದ್ದೇವೆ, ಅವರು ಶೀಘ್ರ ಗುಣಮುಖರಾಗಿ ಬರಲಿ ಎನ್ನುವುದೇ ನಮ್ಮ ಪ್ರಾರ್ಥನೆ ಎಂದು ತಿಳಿಸಿದರು.
ಶೇಕಮಲೆ ಜಮಾಅತ್ ಅಧ್ಯಕ್ಷ ಸುಲೈಮಾನ್ ಹಾಜಿ ಮಾತನಾಡಿ ನಮ್ಮೂರಿನ ವೈದ್ಯರಿಗೆ ಮಾನವೀಯತೆ ನೆಲೆಯಲ್ಲಿ ನಾವು ನೆರವು ನೀಡಿದ್ದು ಇದಕ್ಕೆ ಜಮಾಅತರ ಪೂರ್ಣ ಸಹಕಾರ ಸಿಕ್ಕಿದೆ, ಕಷ್ಟದಲ್ಲಿದ್ದವರಿಗೆ ನೆರವಾಗುವುದೇ ನಿಜವಾದ ಧರ್ಮ ಎಂದು ತಿಳಿಸಿದರು. ಧನ ಸಹಾಯ ನೀಡುವ ವೇಳೆ ಶೇಕಮಲೆ ಜಮಾಅತ್ ಹಲವರು ಉಪಸ್ಥಿತರಿದ್ದರು.






