ಪುಣಚದಲ್ಲಿ ಅಶೋಕ ಜನಮನ- ಉಡುಗೊರೆ ವಿತರಣೆ
ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ನ ಪ್ರವರ್ತಕ, ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಅಶೋಕ ಜನಮನ 2025 ಕಾರ್ಯಕ್ರಮದ ಉಡುಗೊರೆ ವಿತರಣೆ ಕಾರ್ಯಕ್ರಮ ಪುಣಚ ಪರಿಯಲ್ತಡ್ಕ ಶಾಲಾ ಮೈದಾನದಲ್ಲಿ ಫೆ.15ರಂದು ನಡೆಯಿತು.

ಅಶೋಕ ಜನಮನ ಉಡುಗೊರೆ ವಿತರಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, 2025ರ ಅ.20ರಂದು ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನಸಂದಣಿ ಹಾಗೂ ಮಳೆಯ ಅಡಚಣೆಯಿಂದಾಗಿ ಹಲವರು ಉಡುಗೊರೆ ಸಿಗದೇ ವಂಚಿತರಾಗಿದ್ದಾರೆ ಎಂಬ ವಿಷಾದವಿದೆ. ಆ ನಿಟ್ಟಿನಲ್ಲಿ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಉಡುಗೊರೆಯನ್ನು ವಿತರಿಸುತ್ತಿದ್ದೇನೆ ಎಂದ ಶಾಸಕರು ನನ್ನ ಕಾರ್ಯಕ್ರಮಕ್ಕೆ ಬರುವವರೆಲ್ಲರೂ ಬಡವರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಇಂದು ಈ ಸ್ಥಾನಕ್ಕೆ ಬಂದಿದ್ದೇನೆ. ಮುಂದೆಯೂ ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮೆಲ್ಲರ ಆಶೀರ್ವಾದ ಸಿಗುತ್ತದೆ ಎಂಬ ಪೂರ್ಣ ನಂಬಿಕೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಹಲವು ಜನಪರ ಯೋಜನೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಪಂಚ ಗ್ಯಾರಂಟಿ ಯೋಜನೆ ಪ್ರತೀ ಕುಟುಂಬಕ್ಕೂ ಆಸರೆಯಾಗಿದೆ. ಈ ನಾಡಿನ ಬಡ ಜನರಿಗೆ ಕಾಂಗ್ರೆಸ್ ಸರಕಾರವು ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಬಡವರಿಗೆ ನೆರವು ಸಿಕ್ಕಿದರೆ ಮಾತ್ರ ಅವರ ಬದುಕು ಹಸನಾಗಲು ಸಾಧ್ಯ. ಪಕ್ಷಾತೀತವಾಗಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಿ. ನಮ್ಮ ಸರಕಾರದ ಉತ್ತಮ ಕೆಲಸಕ್ಕೆ ಮುಂದೆಯೂ ನೀವೆಲ್ಲ ಆಶೀರ್ವಾದ ಮಾಡಬೇಕು ಎಂದು ಶಾಸಕರು ಹೇಳಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಅಶೋಕ್ ಕುಮಾರ್ ರೈಯವರ ಅಭಿವೃದ್ಧಿ ಕಾರ್ಯಗಳು ಹಾಗೂ ಟ್ರಸ್ಟ್ ಮುಖಾಂತರ ಸಮಾಜದ ಎಲ್ಲಾ ವರ್ಗದವರಿಗೂ ಜನಪರ ಯೋಜನೆಗಳು ನಿರ್ವಹಿಸುತ್ತಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಅಂತ ಬಡವರ ಅಭಿವೃದ್ಧಿಗಾಗಿ ಶ್ರಮ ವಹಿಸುತ್ತಿರುವ ಶಾಸಕರ ಕೆಲಸಕ್ಕೆ ಮುಂದಕ್ಕೆ ನಾವು ಸಂಪೂರ್ಣ ಬೆಂಬಲ ನೀಡಿ ಅವರಿಗೆ ಆಶೀರ್ವಾದ ನೀಡಬೇಕು ಎಂದರು.
ಸನ್ಮಾನ: ಕ್ರೀಡಾ ವಿಭಾಗದಲ್ಲಿ ಅತ್ಯುನ್ನತ ಸಾಧನೆಗೈದ ಕು.ಸ್ಪಂದನಾ ಕುರಡಕಟ್ಟೆ ಹಾಗೂ ಯುನೈಟೆಡ್ ವಾಲಿಬಾಲ್ ಲೀಗ್’ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಬೆಸ್ಟ್ ಲಿಬೆರೋ ಪ್ರಶಸ್ತಿಯನ್ನು ಪಡೆದ ಪಿ.ಸಿ.ಸಿ ಕ್ಲಬ್ ನ ಸದಸ್ಯ ನೌಫಲ್ ಪುಣಚ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿರೀಕ್ಷೆಗೂ ಮೀರಿ ಬಂದ ಜನ: ಅಶೋಕ ಜನಮನ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಆಗಮಿಸಿ ಉಡುಗೊರೆಯನ್ನು ಸ್ವೀಕರಿಸಿದರು. ಮಕ್ಕಳು ಮಹಿಳೆಯರು ಯುವಕರು ವೃದ್ಧರು ಸೇರಿದಂತೆ ಸುಮಾರು 3 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಪುಣಚ ಗ್ರಾಮಸ್ಥರಿಗೆ ಮಾತ್ರ ಉಡುಗೊರೆ ಪಡೆಯಲು ಅವಕಾಶ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳಲ್ಲಿ ಕೂಡ ಉಡುಗೊರೆ ವಿತರಣೆ ನಡೆಯಲಿದೆ ಎಂದು ಟ್ರಸ್ಟ್’ನ ಪ್ರಮುಖರು ತಿಳಿಸಿದ್ದಾರೆ.
ವೇದಿಕೆಯಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ ದೇವರಗುಂಡಿ, ರೈ ಎಸ್ಟೇಟ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ರಾಜೇಂದ್ರ ರೈ ಬೈಲುಗುತ್ತು, ಎಂ.ಎಸ್ ಹಮೀದ್ ಮಣಿಲ, ಅಶೋಕ್ ಬೈಲಡ್ಕ, ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್.ಟಿ ಘಟಕಾಧ್ಯಕ್ಷ ಮಹಾಲಿಂಗ ನಾಯ್ಕ, ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಲ್ಬರ್ಟ್ ಡಿಸೋಜ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಕೇಪು ಗ್ರಾ.ಪಂ ಸದಸ್ಯ ಕರೀಂ ಕುದ್ದುಪದವು, ಪುಣಚ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಂತೋಷ್ ರೈ ಬೈಲುಗುತ್ತು, ಕ್ಸೇವಿಯರ್ ಡಿಸೋಜ, ಪ್ರಧಾನ ಕಾರ್ಯದರ್ಶಿಗಳಾದ ಸಿರಾಜ್ ಮಣಿಲ, ಪ್ರಶಾಂತ್ ಗುಡ್ಡೆಗದ್ದೆ ಉಪಸ್ಥಿತರಿದ್ದರು. ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.





