ರೀಲ್ಸ್ ಹುಚ್ಚು: ವಿಷಕಾರಿ ಏಡಿ ತಿಂದು ಫುಡ್ ಇನ್ಫ್ಲುಯೆನ್ಸರ್ ಸಾವು
ಸೋಷಿಯಲ್ ಮೀಡಿಯಾ ವೀವ್ಸ್ ಗೆ ಬೇಕಾಗಿ ವಿಷಕಾರಿ ‘ಡೆವಿಲ್ ಕಾರ್ಬ್’ ತಿಂದು ಫುಡ್ ಇನ್ಫ್ಲುಯೆನ್ಸರ್ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಎಮ್ಮಾ ಅಮಿತ್ ಮೃತ ಫುಡ್ ಇನ್ಫ್ಲುಯೆನ್ಸರ್. ಈಕೆ ತನ್ನ ಸ್ನೇಹಿತರೊಂದಿಗೆ ಪಲವಾನ್‌ನ ಪೋರ್ಟೊ ಪ್ರಿನ್ಸೆಸಾ ಬಳಿಯ ಮ್ಯಾಂಗ್ರೋವ್ ಕಾಡಿನಲ್ಲಿ ಚಿಪ್ಪು ಮೀನುಗಳನ್ನು ಹಿಡಿದಿದ್ದರು. ಎಮ್ಮಾ ಅವರು ಮೀನುಗಳನ್ನು ಬೇಯಿಸಿ ತಿನ್ನುವುದನ್ನು ಟಿಕ್‌ಟಾಕ್ ಮತ್ತು ಫೇಸ್‌ಬುಕ್‌ಗಾಗಿ ವಿಡಿಯೋ ಮಾಡಿದ್ದರು.
ಮರುದಿನ ಏಡಿಯ ವಿಷದಿಂದ ಆಕೆ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಆಕೆಯು ಪ್ರಜ್ಞೆ ಕಳೆದುಕೊಂಡಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಕೊನೆಯುಸಿರೆಳೆದಿದ್ದಾರೆ.
ಡೆವಿಲ್ ಕಾರ್ಬ್‌ಗಳು ವಿಷಕಾರಿ ರೀಫ್ ಏಡಿಗಳಾಗಿವೆ. ಇವು ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ ಹವಳದ ದಿಬ್ಬಗಳ ಮೇಲೆ ವಾಸಿಸುತ್ತವೆ. ಅವುಗಳು ಪಫರ್‌ಫಿಶ್‌ನಲ್ಲಿಯೂ ಕಂಡುಬರುವ ಸ್ಯಾಕ್ಸಿಟಾಕ್ಸಿನ್ ಮತ್ತು ಟೆಟ್ರೋಡೋಟಾಕ್ಸಿನ್‌ನಂತಹ ಮಾರಕ ನ್ಯೂರೋಟಾಕ್ಸಿನ್‌ಗಳನ್ನು ಹೊಂದಿರುತ್ತವೆ. ಅವುಗಳನ್ನು ತಿನ್ನದಂತೆ ತಜ್ಞರು ಸೂಚಿಸಿದ್ದಾರೆ.





