ಮಾಡಾವು: ಹೊಳೆಗೆ ಪ್ರಾಣಿ ತ್ಯಾಜ್ಯ ಎಸೆತ, ಪೊಲೀಸರಿಂದ ಪರಿಶೀಲನೆ, ಪ್ರಕರಣ ದಾಖಲು
ಪುತ್ತೂರು: ಕೆಯ್ಯೂರು ಗ್ರಾಮದ ಮಾಡಾವು ಗೌರಿ ಹೊಳೆಗೆ ಯಾರೋ ಪ್ರಾಣಿಯ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ಕಟ್ಟಿ ಎಸೆದಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಡಿ.31 ರಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು, ಎಫ್ಎಸ್ಎಲ್ ತಂಡದವರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಮಾಡಾವು ಗೌರಿ ಹೊಳೆಯಲ್ಲಿ ಗೋಣಿ ಚೀಲದ ಕಟ್ಟುಗಳು ಇರುವ ಬಗ್ಗೆ ಡಿ.29ರಂದು ಸ್ಥಳೀಯರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷರು ಪರಿಶೀಲನೆ ಮಾಡುವ ವೇಳೆ ಗೋಣಿ ಚೀಲದಲ್ಲಿ ಪ್ರಾಣಿಯ ವಿವಿಧ ಭಾಗಗಳು ಇರುವಂತೆ ಕಂಡು ಬಂದಿದ್ದು ಆದರೆ ಯಾವ ಪ್ರಾಣಿಯ ಭಾಗಗಳು ಎಂದು ಸ್ಪಷ್ಟವಾಗಿ ಗೊತ್ತಾಗಲಿಲ್ಲ ತಕ್ಷಣವೇ ಅಧ್ಯಕ್ಷರು ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿ ಹೊಳೆಯಲ್ಲಿ ಪ್ರಾಣಿ ತ್ಯಾಜ್ಯ ಇರುವ ಬಗ್ಗೆ ಪರಿಶೀಲನೆ ಮಾಡುವಂತೆ ಕೇಳಿಕೊಂಡಿದ್ದರು.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕಿ ಸುಷ್ಮಾ ಜಿ.ಭಂಡಾರಿ, ಎಎಸ್ಐ ಮುರುಗೇಶ್ ಹಾಗೂ ಸಿಬ್ಬಂದಿಗಳು ಪಶು ವೈದ್ಯಾಧಿಕಾರಿ, ಎಫ್ಎಸ್ಎಲ್ ಸಿಬ್ಬಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಣಿಯಲ್ಲಿದ್ದ ಪ್ರಾಣಿ ತ್ಯಾಜ್ಯವನ್ನು ಪರಿಶೀಲನೆ ಮಾಡಿದ ಪಶು ವೈದ್ಯಾಧಿಕಾರಿಯವರು ಇದು ಆಡಿನ ತ್ಯಾಜ್ಯಗಳೆಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.



