ಬೆಳಗಾವಿ ಅಧಿವೇಶನ: ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್
ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ವಿರುದ್ದ ಮತ್ತೊಮ್ಮೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ‘ಈ ಸದನದಲ್ಲಿ ನಿಜವಾಗಿ ವಿರೋಧ ಪಕ್ಷದ ನಾಯಕ ಎಂದರೆ ನಾನೇ. ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಅಲ್ಲ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಮುಖ್ಯಮಂತ್ರಿಗಳ ಕಚೇರಿಗೂ ಹೋಗಿಲ್ಲ ಎಂದು ಯತ್ನಾಳ್ ವಿಧಾನ ಸಭೆಯಲ್ಲಿ ಹೇಳಿದ್ದಾರೆ.

ಅಲ್ಲದೆ ಡೆಪ್ಯೂಟಿ ಸ್ಪೀಕರ್ ಪಕ್ಕದಲ್ಲಿ ತಮಗೆ ಒಂದು ಕುರ್ಚಿ ನಿಗದಿಪಡಿಸೋದಾದ್ರೆ ನಿಗದಿಪಡಿಸಿ ಎಂದು ಸ್ಪೀಕರ್ ಖಾದರ್ ಅವರಿಗೆ ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರವನ್ನು ಟೀಕಿಸಿದ ಯತ್ನಾಳ್, ಸರ್ಕಾರ ಒಂದು ಕಡೆ ಹೆಣ್ಣುಮಕ್ಕಳ ಪರ ನಾವಿದ್ದೇವೆ ಎಂದು ಹೇಳಿ ಗೃಹಲಕ್ಷ್ಮಿ ಯೋಜನೆಯಡಿ 2,000 ರೂಪಾಯಿ ನೀಡುತ್ತಿದೆ. ಆದರೆ, ಮತ್ತೊಂದೆಡೆ ಕಣ್ಣೀರು ಬರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.




