ವಿಧಾನಸಭೆ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ಬಿಜೆಪಿಯ 18 ಶಾಸಕರು 6 ತಿಂಗಳ ಕಾಲ ಅಮಾನತು
ಬೆಂಗಳೂರು: ವಿಧಾನಸಭೆ ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷ ಬಿಜೆಪಿಯ 18 ಸದಸ್ಯರರುಗಳನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ.

ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್., ಸಿ.ಕೆ. ರಾಮಮೂರ್ತಿ. ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ., ಎಸ್. ಆರ್. ವಿಶ್ವನಾಥ್, ಎಂ.ಆರ್. ಪಾಟೀಲ್ ಅವರನ್ನು ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ಹಾಗೂ ಮುಸ್ಲಿಂ ಮೀಸಲಾತಿ ವಿಚಾರಗಳು ವಿಧಾನಸಭೆ ಕಲಾಪದಲ್ಲಿ ಇಂದು ಬೆಳಗ್ಗೆಯಿಂದಲೇ ಭಾರೀ ಹೈಡ್ರಾಮಾಕ್ಕೆ ಕಾರಣವಾಯಿತು. ಬೆಳಗ್ಗೆ ಸದನ ಶುರುವಾಗುತ್ತಿದ್ದಂತೆಯೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಪ್ರತಿಪಕ್ಷ ಪಟ್ಟು ಹಿಡಿಯಿತು. ಬಳಿಕ ಸಿಎಂ ಸಹ ಇದಕ್ಕೆ ಉತ್ತರ ನೀಡಿ ಅಸಮಾಧಾನಪಡಿಸಿದರು.
ನಂತರ ಮುಸ್ಲಿಂ ಮೀಸಲಾತಿ ವಿಧೇಯಕದ ಕುರಿತು ಸರ್ಕಾರ ಚರ್ಚೆಗೆ ಮುಂದಾಯಿತು. ಇದೇ ವೇಳೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ, ‘ಹನಿಟ್ರ್ಯಾಪ್ ಸರ್ಕಾರ’ ಎಂದು ಘೋಷಣೆಗಳನ್ನು ಕೂಗಿದರು