ಕರಾವಳಿಕ್ರೈಂರಾಜ್ಯ

ಮಾದಕ ವಸ್ತು ಸಾಗಣೆ ಪ್ರಕರಣ: ಯುವತಿ ಸಹಿತ ಐವರು ಆರೋಪಿಗಳಿಗೆ ಶಿಕ್ಷೆ ಪ್ರಕಟ



ಮಂಗಳೂರು: ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂ ಮಾರಾಟ ಮಾಡುವುದಕ್ಕಾಗಿ ಅಕ್ರಮ ಸಾಗಣೆ ಮಾಡಿದ ಹಾಗೂ ಮಾದಕ ವಸ್ತು ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿಯೊಬ್ಬಳ ಸಹಿತ ಐವರು ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಲಯವು ಕಠಿಣ ಸಜೆ ಮತ್ತು ದಂಡ ವಿಧಿಸಿದೆ.



ಮೂಲತಃ ಸೂಡನ್ ದೇಶದ ಪ್ರಸಕ್ತ ಬೆಂಗಳೂರಿನ ವರ್ತೂರ್ ಗುಂಟೂರ್‌ಪಾಳ್ಯ ನಿವಾಸಿ ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮುಹಮ್ಮದ್ ರಮೀಝ್ ಮತ್ತು ಅಬ್ದುಲ್ ರವೂಫ್, ಕಾಸರಗೋಡು ಕುನ್ನಿಲ್‌ ಮೊಯ್ದಿನ್ ರಶೀದ್ ಮತ್ತು ಮೂಲತಃ ತಮಿಳುನಾಡಿನ ಊಟಿ ನಿವಾಸಿ ಪ್ರಸಕ್ತ ಬೆಂಗಳೂರು ಮಡಿವಾಳ ನಿವಾಸಿ ಸಬಿತಾ ಅಲಿಯಾಸ್ ಚಿಂಚು ಅಲಿಯಾಸ್ ಸಮೀರಾ(25) ಶಿಕ್ಷೆಗೆ ಒಳಗಾದವರು.


ಎನ್‌ಡಿಪಿಎಸ್ ಆ್ಯಕ್ಟ್ 21, 21(ಸಿ) ಪ್ರಕಾರ ಮುಹಮ್ಮದ್ ರಮೀಝ್ ಗೆ 14 ವರ್ಷ ಕಠಿಣ ಸಜೆ ಮತ್ತು 1.45 ಲಕ್ಷ ರೂ. ದಂಡ, ಅಬ್ದುಲ್ ರವೂಫ್‌ಗೆ 13 ವರ್ಷ ಕಠಿಣ ಸಜೆ ಮತ್ತು 1.35 ಲಕ್ಷ ರೂ. ದಂಡ, ಡ್ಯಾನಿ, ಮೊಯ್ದಿನ್ ರಶೀದ್ ಮತ್ತು ಸಬಿತಾಳಿಗೆ ತಲಾ 12 ವರ್ಷ ಜೈಲು ಸಜೆ, 1.25 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಧೀಶ ಬಸವರಾಜ್ ಆದೇಶಿಸಿದ್ದಾರೆ.

ಈ ಐವರೂ ಮಾದಕ ಪದಾರ್ಥ ಸೇವಿಸಿದ್ದು ಸಾಬೀತಾಗಿದ್ದು, ಈ ಸಂಬಂಧ ಎಲ್ಲರಿಗೂ ಹೆಚ್ಚುವರಿಯಾಗಿ ಆರು ತಿಂಗಳ ಕಠಿಣ ಸಜೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ ಒಂದು ತಿಂಗಳ ಕಠಿಣ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.


2022ರ ಜೂನ್ 6ರಂದು ಮಂಗಳೂರು ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ತಮ್ಮ ತಂಡದೊಂದಿಗೆ ದಾಳಿ ನಡೆಸಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಐವರನ್ನು ಬಂಧಿಸಿದ್ದರು. ಬಂಧಿತರ ಬಳಿಯಿಂದ 125 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಸಂಬಂಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.


ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ, ತೀರ್ಪು ನೀಡಿದ್ದಾರೆ. ಮಂಗಳೂರಿನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ಪ್ರಾಸಿಕ್ಯೂಷನ್ ಪರ ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!