ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಅರಿಯಡ್ಕ ಉತ್ಸವ
ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ಅರಿಯಡ್ಕ ಉತ್ಸವ ನ.30ರಂದು ಕೌಡಿಚ್ಚಾರು ಎಸ್.ಎಂ ಬಿಲ್ಡಿಂಗ್ ಮುಂಭಾಗದಲ್ಲಿ ಅರಿಯಡ್ಕ ಬಾಲಕೃಷ್ಣ ಶೆಟ್ಟಿ ವೇದಿಕೆಯಲ್ಲಿ ನಡೆಯಿತು. ಅರಿಯಡ್ಕ ವಲಯ ಅರಣ್ಯ ಸಮಿತಿ ಮಾಜಿ ಅಧ್ಯಕ್ಷ ರಾಜೀವ್ ರೈ ಕುತ್ಯಾಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅರಿಯಡ್ಕ ಉತ್ಸವದಲ್ಲಿ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಕಾರ್ಯಕ್ರಮದ ಬಗ್ಗೆ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಗಣ್ಯರೆಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಜನರಿಗೆ ಭಾರೀ ಉಪಕಾರವಾಗಿದೆ, ಗ್ಯಾರಂಟಿ ಯೋಜನೆಯನ್ನೂ ಟೀಕಿಸುವ ಬಿಜೆಪಿಯವರು ಜನರನ್ನು ದಿಕ್ಕು ತಪ್ಪಿಸುವುದನ್ನು ಇನ್ನಾದರೂ ನಿಲ್ಲಿಸಲಿ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಕನಸಾಗಿದ್ದು ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ನಮ್ಮ ಮುಂದಿದೆ, ಮುಂದಕ್ಕೆ ಹಂತ ಹಂತವಾಗಿ ಎಲ್ಲ ಅಭಿವೃದ್ಧಿ ಕಾಮಗಾರಿಗಳೂ ನಡೆಯಲಿದೆ ಎಂದರು. ಅರಿಯಡ್ಕ ಉತ್ಸವದ ಬಗ್ಗೆ ಹಾಡಿ ಹೊಗಳಿದ ಶಾಸಕರು ಒಳ್ಳೆಯ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಹೇಗೆ ನಡೆಸಬಹುದೆಂಬುವುದನ್ನು ಇಕ್ಬಾಲ್ ಹುಸೇನ್ ಅವರಿಂದ ನೋಡಿ ಕಲಿಯಬೇಕಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ಈ ರೀತಿ ಜನರನ್ನು ಸೇರಿಸಲು ಸಾಧ್ಯ ಎಂದು ಹೇಳಿದರು. ಇಕ್ಬಾಲ್ ಹುಸೇನ್ ಅವರು ನನ್ನ ಬಳಿ ಬಂದಾಗ ಅವರಿಗಾಗಿ ಏನನ್ನೂ ಕೇಳಿಲ್ಲ, ಪಾಪೆಮಜಲು ಪ್ರೌಢಶಾಲೆಯನ್ನು ತನ್ನ ಸ್ವಂತ ಶಾಲೆಗಿಂತ ಹೆಚ್ಚು ಆಸಕ್ತಿ ವಹಿಸಿ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು. ಇಕ್ಬಾಲ್ ಹುಸೇನ್ ಅವರು ವಲಯ ಅಧ್ಯಕ್ಷರಾದ ಬಳಿಕ ಮೊದಲು ಕೇಳಿದ್ದು ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಅನುದಾನ. ಅಷ್ಟು ಅರ್ಜೆಂಟಲ್ಲಿ ಅನುದಾನ ಯಾಕೆ ಅಂತ ಕೇಳಿದಾಗ, ಆ ಭಜನಾ ಮಂದಿರಕ್ಕೆ ಸಾಕಷ್ಟು ಜನರು ಬರ್ತಾ ಇರ್ತಾರೆ, ಹಾಗಾಗಿ ಅಲ್ಲಿನ ರಸ್ತೆ ಅಭಿವೃದ್ಧಿಗೆ ಮೊದಲು ಅನುದಾನ ಇಡಬೇಕೆಂದು ಹೇಳಿದರು. ಅದರಂತೆ ೫ ಲಕ್ಷ ರೂ ಅನುದಾನ ಕೊಟ್ಟಿದ್ದೇನೆ, ಭಜನಾ ಮಂದಿರದ ರಸ್ತೆ ಕಾಮಗಾರಿ ಆಗಿದೆ ಎಂದು ಶಾಸಕರು ಹೇಳಿದರು.

ಬ್ಲಾಕ್ ಅಧ್ಯಕ್ಷರಿಂದ ‘ಸೂಪರ್ ವಲಯಾಧ್ಯಕ್ಷ’ ಎಂದು ಬಣ್ಣನೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ ಸಿದ್ದರಾಮಯ್ಯ ಸರಕಾರದ ೫ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನ ವಿಧಾನವನ್ನೇ ಬದಲಾಯಿಸಿದ್ದು ಜನರು ಇದೀಗ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ, ಪುತ್ತೂರಿಗೆ ಮೆಡಿಕಲ್ ಕಾಲೇಜು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ತರುವ ಮುಖಾಂತರ ಅಭೂತಪೂರ್ವ ಅಭಿವೃದ್ಧಿಯನ್ನು ಮಾಡುತ್ತಿರುವ ಶಾಸಕ ಅಶೋಕ್ ರೈಯವರ ಕಾರ್ಯವೈಖರಿಯನ್ನು ಮೆಚ್ಚಿ ಪುತ್ತೂರಿನ ವಿವಿಧ ಕಡೆಗಳಲ್ಲಿ ಜನರು ಕಾಂಗ್ರೆಸಿನತ್ತ ಒಲವು ತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಅರಿಯಡ್ಕ ಉತ್ಸವವನ್ನು ಶ್ಲಾಘಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಅವರು ಇದು ಅರಿಯಡ್ಕ ಉತ್ಸವ ಅಲ್ಲ, ಇದು ಪುತ್ತೂರು ಉತ್ಸವ ರೀತಿಯಲ್ಲಿ ಆಗಿದೆ ಎಂದು ಬಣ್ಣಿಸಿದರು. ಗ್ರಾಮ ಮಟ್ಟದಲ್ಲಿ ೨೫, ೫೦ ಜನರನ್ನು ಸೇರಿಸಲು ಕಷ್ಟ, ಅಂತದ್ರಲ್ಲಿ ೪೦೦ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ಅದಕ್ಕೆ ಇಕ್ಬಾಲ್ ಹುಸೇನ್ ಅವರ ನಾಯಕತ್ವವೇ ಕಾರಣ. ಈ ರೀತಿಯ ವಲಯ ಅಧ್ಯಕ್ಷರು ಎಲ್ಲಾ ಕಡೆಗಳಲ್ಲೂ ಆಗಬೇಕಾದ ಅಗತ್ಯವಿದ್ದು ಈ ರೀತಿಯಲ್ಲಿ ಕಾರ್ಯಪ್ರವೃಗೊಂಡರೆ ಮುಂಬರುವ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಷಯವೇ ಅಲ್ಲ ಎಂದು ಅವರು ಹೇಳಿದರು. ಎಲ್ಲಾ ವಲಯ ಕಾಂಗ್ರೆಸಿನ ಅಧ್ಯಕ್ಷರುಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ಅರಿಯಡ್ಕ ವಲಯದ ಅಧ್ಯಕ್ಷ ಇಕ್ಬಾಲ್ ಹುಸೇನ್ ‘ಸೂಪರ್ ವಲಯ ಅಧ್ಯಕ್ಷ’ರಾಗಿದ್ದಾರೆ ಎಂದು ಅವರು ಬಣ್ಣಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರು ಶಾಸಕ ಅಶೋಕ್ ಕುಮಾರ್ ರೈಯವರು ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ನಮ್ಮ ಗ್ರಾಮಕ್ಕೆ ಐದು ಕೋಟಿ ರೂ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಭಜನಾ ಮಂದಿರ, ಮಸೀದಿ, ಶಾಲೆ ಹೀಗೆ ಎಲ್ಲಾ ಕಡೆಗಳಿಗೂ ಅನುದಾನ ಕೊಡುವ ಮುಖಾಂತರ ಅವರು ಅಭಿವೃದ್ಧಿ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ ಎಂದರು. ನಾನು ನನಗಾಗಿ ಏನನ್ನು ಕೇಳಿಲ್ಲ, ನಮ್ಮ ಗ್ರಾಮಕ್ಕಾಗಿ, ಗ್ರಾಮದ ಅಭಿವೃದ್ಧಿಗಾಗಿ ಶಾಸಕರ ಜೊತೆ ಜಗಳವಾಡಿ ಅನುದಾನವನ್ನು ಕೇಳಿದ್ದೇನೆ, ನಾವು ಕೇಳಿದಾಗಲೆಲ್ಲ ನಮಗೆ ಶಾಸಕರು ಅನುದಾನ ಕೊಟ್ಟು ಸಹಕರಿಸಿದ್ದಾರೆ, ಈ ರೀತಿ ಅಭಿವೃದ್ಧಿ ಮಾಡುವಂತಹ ಶಾಸಕರು ನಮಗೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಅವರು ಹೇಳಿದರು. ಶಾಸಕರು ಎರಡೂವರೆ ವರ್ಷದ ಅವಧಿಯಲ್ಲಿ ಅರಿಯಡ್ಕ ಗ್ರಾಮಕ್ಕೆ ರೂ.5 ಕೋಟಿ ಅನುದಾನ ನೀಡಿದ್ದು ಅದರ ವಿವರಗಳನ್ನೊಳಗೊಂಡ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು. ಐದು ಮಂದಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೇ ಸಂರ್ದಭದಲ್ಲಿ ಸನ್ಮಾನಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ನ್ಯಾಯವಾದಿ ಕುಂಬ್ರ ದುರ್ಗಾ ಪ್ರಸಾದ್ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಝೀರ್ ಮಠ ಮೊದಲಾದವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ನೀರ್ಪಾಡಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳ, ಬಡಗನ್ನೂರು ಗ್ರಾ.ಪಂ ಸದಸ್ಯ ರವಿರಾಜ್ ರೈ ಕುತ್ಯಾಡಿ, ಬೃಜೇಶ್ ಶೆಟ್ಟಿ, ಇಬ್ರಾಹಿಂ ಗೋಳಿಕಟ್ಟೆ, ಕುಂಬ್ರ ಸಿ.ಎ ಬ್ಯಾಂಕ್ ಮಾಜಿ ನಿರ್ದೇಶಕ ಸತೀಶ್ಚಂದ್ರ ರೈ ಗೋಳ್ತಿಲ, ಅರಿಯಡ್ಕ ಗ್ರಾ.ಪಂ ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು, ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನುತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೂತ್ ಅಧ್ಯಕ್ಷ ಬಶೀರ್ ಕೌಡಿಚ್ಚಾರ್ ಸ್ವಾಗತಿಸಿ ವಂದಿಸಿದರು.





