ಸೀನಿಮೀಯ ರೀತಿಯಲ್ಲಿ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ಚಿನ್ನ ದರೋಡೆ: ಆರೋಪಿಗಳು ಅರೆಸ್ಟ್
ಮಂಗಳೂರು: ಸ್ಕೂಟರ್ ನಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಕಾರ್ ಸ್ಟ್ರೀಟ್ಬಳಿಯಿಂದ ಅಪಹರಿಸಿದ ಘಟನೆ ನಡೆದಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆ.26ರಂದು ಚಾಯ್ಸ್ ಗೋಲ್ಡ್ ಹೆಸರಿನ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫ ಎಂಬವರು ಸ್ಕೂಟರ್ ನ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 8-45 ಗಂಟೆ ಸಮಯಕ್ಕೆ ಮಂಗಳೂರು ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರೊಂದರಲ್ಲಿ ಬಂದು ತಡೆದು ನಿಲ್ಲಿಸಿದ್ದು, ಇದೇ ವೇಳೆಗೆ ಉಳಿದ ಆರೋಪಿಗಳು ಕಾರೊಂದರಲ್ಲಿ ಬಂದು ಮುಸ್ತಾಫ ರವರನ್ನು ಕಾರಿಗೆ ಬಲವಂತವಾಗಿ ಹಾಕಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿ ಮಂಗಳೂರು ಎಕ್ಕೂರು ಎಂಬಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 111/2025 ಕಲಂ 137(2), 310(2) BNS -2023 ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಬಾಲಕನೊಬ್ಬ ಸೇರಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದು ಬಂದಿತ ಆರೋಪಿಗಳನ್ನು ಫಾರಿಶ್(18), ಸಫ್ವಾನ್(23), ಅರಾಫತ್ ಆಲಿ(18) ಫರಾಝ್(19) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ.
ಆರೋಪಿ ಫಾರಿಶ್ ಈ ಹಿಂದೆ ಮಂಗಳೂರು ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ. ಫಾರಿಶ್, ಬಾಲಕನಿಗೆ ಚಿನ್ನದ ಗಟ್ಟಿಯನ್ನು ಕೊಂಡುಹೋಗುವ ಮಾಹಿತಿ ನೀಡುವಂತೆ ತಿಳಿಸಿದ ಮೇರೆಗೆ ಪಿರ್ಯಾದಿ ಮುಸ್ತಾಫರವರು ಚಿನ್ನದ ಗಟ್ಟಿಯನ್ನು ದಿನಾಂಕ 26-09-2025 ರಂದು ರಾತ್ರಿ 8-30 ಗಂಟೆಗೆ ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ ಅವರ ಚಲನವಲನದ ಮಾಹಿತಿಯನ್ನು ಆರೋಪಿ ಫಾರಿಶ್ ನಿಗೆ ಬಾಲಕ ನೀಡಿದ್ದು ಅದರಂತೆ ಈ ಆರೋಪಿಗಳು ಇತರ ಆರೋಪಿಗಳೊಂದಿಗೆ ಸೇರಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಲು ಪೂರ್ವಯೋಜಿತ ಸಂಚು ರೂಪಿಸಿ, ಆರೋಪಿ ಸಫ್ವಾನ್ ಕೃತ್ಯಕ್ಕೆ ಕಾರನ್ನು ಒದಗಿಸಿದ್ದು, ಮುಸ್ತಾಫರವರು ತನ್ನ ಸ್ಕೂಟರಿನ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ರವರು ಸುಜುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದು, ಇದೇ ಸಮಯ ಉಳಿದ ಆರೋಪಿಗಳು ಸಫ್ವಾನ್ ಒದಗಿಸಿದ ಬಿಳಿ ಬಣ್ಣದ ಕಾರೊಂದರಲ್ಲಿ ಬಂದು ಪಿರ್ಯಾದಿ ಮುಸ್ತಾಫರವರನ್ನು ಬಲತ್ಕಾರವಾಗಿ ಕಾರಿನಲ್ಲಿ ಹಾಕಿ ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ಮಂಗಳೂರು ಎಕ್ಕೂರು ಎಂಬಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ. ಅಂದಾಜು 1.5 ಕೆಜಿ ಚಿನ್ನದ ಗಟ್ಟಿ ಯನ್ನು ದರೋಡೆ ಮಾಡಿದ್ದರು.
ಈ ಪ್ರಕರಣದಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಸುಜುಕಿ ಆಕ್ಸೆಸ್ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದು ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಬಾಕಿ ಇರುತ್ತದೆ. ಈ ಪ್ರಕರಣದ ಆರೋಪಿಗಳನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಂಗಳೂರು ನಗರ ಮತ್ತು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ, ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಘಟಕ ಮಂಗಳೂರು ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರ ಜಂಟಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.