ಮಂಗಳೂರು: ಚೂರಿ ಇರಿತ ಪ್ರಕರಣ
ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಎಡಪದವು ಎಂಬಲ್ಲಿ ಸೋಮವಾರ ಸಂಜೆ ಅಖಿಲೇಶ್ ಎಂಬವರ ಮೇಲೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ಸಿನಾನ್‌ನನ್ನು ಸಾರ್ವಜನಿಕರು ಹಿಡಿದು ಸ್ಥಳದಲ್ಲೇ ಪೊಲೀಸರಿಗೆ ಒಪ್ಪಿಸಿದ್ದರು. ಉಳಿದಂತೆ ಇರ್ಷಾದ್, ಅಕ್ರಮ್ ಮತ್ತು ನಿಸಾನ್ ಬಂಧಿತ ಆರೋಪಿಗಳು.

ಬಂಧಿತರ ಪೈಕಿ ಅಕ್ರಮ್ ಮತ್ತು ನಿಸಾನ್ ವಿರುದ್ದ ಗಾಂಜಾ ಸಂಬಂಧಿಸಿದ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಅವರ
ವಿರುದ್ದ ಕೊಲೆ ಯತ್ನ ಪ್ರಕರಣದ ಜೊತೆಗೆ ಎನ್‌ಡಿಪಿಎಸ್ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಪೂಪಾಡಿ ಕಲ್ಲುವಿನಿಂದ ಮಂಗಳೂರು ಕಡೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ, ಒಂದು ದ್ವಿಚಕ್ರವಾಹನದಲ್ಲಿ ನಾಲ್ಕು ಮಂದಿ ತಲವಾರು ಹಿಡಿದು ಸಂಚರಿಸುತ್ತಿರುವುದನ್ನು ಗಮನಿಸಿ ಅದನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಿಸಲು ಮುಂದಾಗಿದ್ದೆ. ಇದನ್ನು ಕಂಡ ಆರೋಪಿಗಳು ಕೊಲೆಗೈಯ್ಯುವ ಉದ್ದೇಶದಿಂದ ತಲವಾರಿನಿಂದ ದಾಳಿ ಮಾಡಿದ್ದಾರೆ ಎಂದು ಎಡಪದವು ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.



