ಕರಾವಳಿಕ್ರೈಂ

ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ

ಮಂಗಳೂರು: ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಅಡೂರು ಟಿಬೆಟ್ ಕಾಲನಿ ನಿವಾಸಿ ಪ್ರಸಕ್ತ ಬಜೆ ಕಿನ್ನಿಪದವಿನಲ್ಲಿ ನೆಲೆಸಿರುವ ಅಬ್ದುಲ್ ಸಲಾಂ ಅದ್ದೂರು (47) ಬಂಧಿತ ಆರೋಪಿ.


ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ 2006 ಡಿ.1ರಂದು ಸುಖಾನಂದ್ ಶೆಟ್ಟಿ ಎಂಬವರನ್ನು ಕಬೀರ್ ಹಾಗೂ ಆತನ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಪೈಕಿ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ ಯಾನೆ ಅಡ್ಡೂರು ಲತೀಫ್ ಹಾಗೂ ಅಬ್ದುಲ್ ಸಲಾಂ ಅಡ್ಡೂರು ಸಹೋದರರು ಅಡ್ಡೂರು ಟಿಬೇಟ್ ಕಾಲನಿಯಲ್ಲಿರುವ ಮನೆಯಲ್ಲಿ ಆಶ್ರಯ ನೀಡಿ 2 ದಿನ ಮನೆಯಲ್ಲಿರಿಸಿಕೊಂಡು ಪೊಲೀಸರಿಂದ ತಪ್ಪಿಸಿ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದರು. ನಂತರ ಕಬೀರ್‌ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ನಂತರ ತಲೆ ಮರೆಸಿಕೊಳ್ಳಲು ಸಹಾಯ ಮಾಡಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿ ಅಬ್ದುಲ್ ಸಲಾಂ ಸುಮಾರು 19ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಈತನ ವಿರುದ್ಧ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಈತ ಹಲವು ವರ್ಷ ಗಲ್ಫ್ ದೇಶದಲ್ಲಿ ಇದ್ದು ಸದ್ಯ ಬಜ್ಜೆಯ ಕಿನ್ನಿಪದವು ಬಳಿ ಮನೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ನ.18ರಂದು  ದಾಳಿ ಮಾಡಿ ಆತನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಪತ್ತೆ ಕಾರ್ಯಕ್ಕೆ  ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ, ಪಿಎಸ್.ಐ ರಘುನಾಯಕ್ ಹಾಗೂ ಠಾಣಾ ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ  ಭಾಗವಹಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!