ಕ್ರೈಂರಾಷ್ಟ್ರೀಯ

ಬೆಚ್ಚಿಬಿದ್ದ ಕೇರಳ: ಸಂಪತ್ತಿನ ಆಸೆಗಾಗಿ ಇಬ್ಬರು ಮಹಿಳೆಯರ ನರಬಲಿ!

ಪತ್ತನಂತಿಟ್ಟ: ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಮಹಿಳೆಯರ ಶವ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನರಬಲಿಗಾಗಿ ಕೊಲೆ ಮಾಡಲಾಗಿರಬಹುದು ಎಂದು ಶಂಕಿಸಲಾಗಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ತಿರುವಳ್ಳ ಎಂಬಲ್ಲಿ ಘಟನೆ ನಡೆದಿದ್ದು, ಈ ಕೃತ್ಯ ಕೇರಳದಾದ್ಯಂತ ಸಂಚಲನ ಮೂಡಿಸಿದೆ.

ಮೃತರನ್ನು ಪದ್ಮಾ ಹಾಗೂ ರೋಸ್ಲಿನ್ ಎಂದು ಗುರುತಿಸಲಾಗಿದ್ದು, ಇವರನ್ನು ಎರ್ನಾಕುಳಂನಿಂದ ಅಪಹರಣ ಮಾಡಿ ತಿರುವಳ್ಳದಲ್ಲಿ ನರಬಲಿ ನೀಡಲಾಗಿದೆ ಎಂದು ಪೊಲೀಸರಿಂದ ಮಾಹಿತಿ ಲಭಿಸಿದೆ. ದಂಪತಿಗಳಿಬ್ಬರು ಈ ಕೃತ್ಯ ಎಸಗಿದ್ದು, ಆರೋಪಿಗಳನ್ನು ಭಗವಾಲ್‌ ಸಿಂಗ್‌, ಆತನ ಪತ್ನಿ ಲೀಲಾ ಹಾಗೂ ಏಜೆಂಟ್‌ ಶಿಹಾಬ್‌ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳು ಪೊಲೀಸ್‌ ವಶದಲ್ಲಿ ಇದ್ದಾರೆ.

ಘಟನೆಯ ಹಿನ್ನೆಲೆ:
ಇದೇ ವರ್ಷ ಸೆಪ್ಟೆಂಬರ್ 26 ರಂದು ಕಾಡವಾಂತ್ರ ಎಂಬಲ್ಲಿ ಪದ್ಮಾ ಎಂಬವರ ಅಪಹರಣವಾಗಿದೆ ಎನ್ನುವ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದಿದ್ದ ಪೊಲೀಸರಿಗೆ, ಜೂನ್‌ ತಿಂಗಳಲ್ಲಿ ಇದೇ ಮಾದರಿಯಲ್ಲಿ ಕಾಲಡಿಯ ರಾಸ್ಲಿನ್ ಎಂಬವರ ಅಪಹರಣವಾಗಿದೆ ಎನ್ನುವ ಮಾಹಿತಿ ಸಿಗುತ್ತದೆ. ಜಾಡು ಹಿಡಿದು ಹೊರಟ ಪೊಲೀಸರಿಗೆ ಹೀಗೊಂದು ಘಟನೆ ನಡೆದಿರುವುದು ಪತ್ತೆಯಾಗಿದೆ.

ನರಬಲಿ ನೀಡಲಾದ ಇಬ್ಬರ ಕತ್ತುಗಳನ್ನು ಕತ್ತರಿಸಲಾಗಿದ್ದು, ದೇಹಗಳನ್ನು ತುಂಡು ತುಂಡು ಮಾಡಿ ಹೂತು ಹಾಕಲಾಗಿದೆ. ಹಣ ಹಾಗೂ ಐಶ್ಚರ್ಯಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎನ್ನುವುದು ಪೊಲೀಸರಿಂದ ಸಿಕ್ಕ ಮಾಹಿತಿ. ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.
‘ಇಬ್ಬರು ಮಹಿಳೆಯರನ್ನು ಕೊಲೆ ಮಾಡಲಾಗಿದೆ. ಅವರನ್ನು ಅವರ ಮನೆಯ ಸಮೀಪವೇ ಕೊಲೆ ಮಾಡಿ ಹೂತು ಹಾಕಿದ್ದಾರೆ. ನರಬಲಿಗಾಗಿ ಈ ಕೊಲೆ ನಡೆದಿದೆ. ಈ ಥರದ ಹಲವು ಘಟನೆಗಳು ನಡೆದಿರುವ ಬಗ್ಗೆ ಮಾಹಿತಿ ಇದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಪೂರ್ಣ ಮಾಹಿತಿಯನ್ನು ಸದ್ಯದಲ್ಲೇ ನೀಡಲಿದ್ದೇವೆ’ ಎಂದು ಕೊಚ್ಚಿ ನಗರ ಪೊಲೀಸ್‌ ಆಯುಕ್ತ ನಾಗರಾಜು ಚಕ್ಲಿಯಾನ್‌ ಹೇಳಿದ್ದಾರೆ.

‘ಈ ಪ್ರಕರಣವನ್ನು ವಿವಿಧ ಕೋನಗಳಿಂದ ನಾವು ತನಿಖೆ ಮಾಡುತ್ತಿದ್ದೇವೆ. ಘಟನೆ ಸಂಬಂಧ ಆರೋಪಿಗಳಿಂದ ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಘಟನಾ ಸ್ಥಳಕ್ಕೆ ನಮ್ಮ ಸಿಬ್ಬಂದಿಗಳು ತೆರಳಿ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗ ದಂಪತಿಗಳ ಹಣಕಾಸಿನ ಏಳ್ಗೆಗಾಗಿ ಈ ನರಬಲಿ ನಡೆದಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಅಲ್ಲದೇ ಇದಕ್ಕಾಗಿ ಏಜೆಂಟ್‌ ಆಗಿ ಕೆಲಸ ಮಾಡಿದ ಶಿಹಾಬ್‌ ಎಂಬಾತನಿಗೂ ಹಣ ಪಾವತಿ ಮಾಡಲಾಗಿದೆ ಎನ್ನುವ ವರದಿ ಕೂಡ ನಮಗೆ ಸಿಕ್ಕಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಎರ್ನಾಕುಳಂನಲ್ಲಿ ನಾಪತ್ತೆಯಾದ ಮಹಿಳೆಯನ್ನು ಕೊಲೆ ಮಾಡಿ ಶವ ಹೂತು ಹಾಕಲಾಗಿದೆ. ಹೀಗಾಗಿ ಹೆಚ್ಚಿನ ತನಿಖೆ ನಡೆಸಬೇಕಾಗಿದೆ. ಇದಕ್ಕೆ ಹೆಚ್ಚಿನ ಸಮಯ ತಗುಲಲಿದೆ. ಘಟನೆಯಲ್ಲಿ ಇನ್ನು ಹೆಚ್ಚಿನ ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಈ ನಿಟ್ಟಿನಲ್ಲಿಯೂ ತನಿಖೆ ಸಾಗಲಿದೆ’ ಎಂದು ಆಯುಕ್ತ ನಾಗರಾಜ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!