ಉಪ್ಪಿನಂಗಡಿ: ಹಾಡಹಗಲೇ ಅಂಗಡಿಯಿಂದ ಲಕ್ಷಾಂತರ ರೂ. ನಗದು ಕಳವು
ಉಪ್ಪಿನಂಗಡಿ: ಹಾಡಹಗಲೇ ಅಂಗಡಿಯಿಂದ ಲಕ್ಷಾಂತರ ರೂ. ನಗದು ಕಳ್ಳತನ ಆದ ಘಟನೆ ಅ.27ರಂದು ಮಧ್ಯಾಹ್ನ ಉಪ್ಪಿನಂಗಡಿ ಗಾಂಧಿಪಾರ್ಕ್ ಬಳಿ ನಡೆದಿದೆ.
ಇಲ್ಲಿನ ಶ್ರೀ ರಾಮಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರವಾದ ‘ಗುಂಡಿಜೆ ಟ್ರೇಡರ್ಸ್’ನಲ್ಲಿ ಈ ಘಟನೆ ನಡೆದಿದೆ.

ಮಧ್ಯಾಹ್ನ 12ರ ಸುಮಾರಿಗೆ ಅಂಗಡಿ ಮಾಲಕ ಕೊಯಿಲ ಗ್ರಾಮದ ವಳಕಡಮ ನಿವಾಸಿ ವಸಂತ ಗುಂಡಿಜೆಯವರು ವಾಣಿಜ್ಯ ಸಂಕೀರ್ಣದ ಹಿಂಬದಿಯಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ಅಂಗಡಿಯ ಶಟರ್ ತೆರದಿಟ್ಟು, ಕ್ಯಾಶ್ ಡ್ರಾಯರ್‌ಗೆ ಬೀಗ ಹಾಕಿದ್ದರು. ವಾಪಸ್ ಬಂದಾಗ ಕ್ಯಾಶ್ ಡ್ರಾಯರ್‌ನಲ್ಲಿದ್ದ ಐದು ಲಕ್ಷ ರೂ.ಗಳನ್ನು ಎಗರಿಸಿರುವುದು ಅವರ ಗಮನಕ್ಕೆ ಬಂದಿದ್ದು, ಈ ವೇಳೆ ಅಂಗಡಿಯೊಳನ ಸಿಸಿಟಿವಿ ಕ್ಯಾಮರಾ ಆಫ್ ಆಗಿತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕೆಲವು ದಿನಗಳಿಂದ ಅಂಗಡಿ ಮಾಲಕನನ್ನು ಹಿಂಬಾಲಿಸಿ ಇವರ ಚಲನವಲನಗಳನ್ನು ಗಮನಿಸಿದ ವ್ಯಕ್ತಿಯೇ ಈ ಕೃತ್ಯ ನಡೆಸಿರಬಹುದಾದ ಶಂಕೆ ವ್ಯಕ್ತವಾಗಿದೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಪುತ್ತೂರು ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ, ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ಅವಿನಾಶ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.





