ದಕ್ಷ ಅಧಿಕಾರಿಗಳ ನೇಮಕದ ಬಳಿಕ ದ.ಕ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ-ಸಿಎಂ
ಪುತ್ತೂರು: ಕೋಮು ಸಂಘರ್ಷ, ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂಬರ್ 1 ಸ್ಥಾನದಲ್ಲಿದ್ದು
ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅ.19ರಂದು ಪುತ್ತೂರು ಕೊಂಬೆಟ್ಟು ಮೈದಾನದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು ಇಲ್ಲಿ ಜಾತಿ, ಧರ್ಮದ ಹೆಸರಿನಲ್ಲಿಪರಸ್ಪರ ಎತ್ತಿ ಕಟ್ಟುವವರ ಮಕ್ಕಳು ಯಾರೂ ಈ ಜಗಳದಲ್ಲಿ ಇರಲ್ಲ. ಮೇಲ್ಜಾತಿ, ಶ್ರೀಮಂತರ ಮಕ್ಕಳು ಯಾರೂ ಇಂತಹ ವಿಷಯದಲ್ಲಿ ಬಲಿಯಾಗುವುದಿಲ್ಲ. ನಾನು ಯಾರ ಮಾತನ್ನೂ ಕೇಳಿಲ್ಲ, ದಕ್ಷ ಕಮಿಷನರ್ ಮತ್ತು ಎಸ್ಪಿ ಅವರನ್ನು ನೇಮಕ ಮಾಡಿದೆ. ದಕ ಜಿಲ್ಲೆ ಈಗ ಶಾಂತವಾಗಿದೆ. ಈಗ ಸುಧಾರಣೆ ಆಗಿಲ್ವಾ? ಎಂದು ಕೇಳಿದರು.
ದಕ್ಷ ಅಧಿಕಾರಿಗಳು ಇದ್ರೆ ಬದಲಾವಣೆ ಸಾಧ್ಯ. ಯಾವತ್ತಿಗೂ ನಾವು ಅಮಾಯಕರ ಮಕ್ಕಳನ್ನ ಸಾಯಿಸೋ ಕೆಲಸ ಮಾಡಬಾರದು. ಬೇರೆ ಧರ್ಮದವರನ್ನ ದ್ವೇಷ ಮಾಡೋ ಕೆಲಸ ಮಾಡಬಾರದು, ಧರ್ಮ ಅದನ್ನು ಕಲಿಸಿಲ್ಲ ಎಂದರು.
ಯಾವ ಧರ್ಮವೂ ದ್ವೇಷಿಸಿ ಎನ್ನುತ್ತಿಲ್ಲ, ಸಮಾಜದಲ್ಲಿ ಅನೇಕ ಜಾತಿ ಮತ್ತು ಧರ್ಮಗಳಿವೆ. ಯಾವ ಧರ್ಮವೂ ದ್ವೇಷ ಮಾಡಿ ಅಂತ ಯಾರಿಗೂ ಹೇಳಲ್ಲ. ಪ್ರತಿಯೊಬ್ಬನನ್ನೂ ಪ್ರೀತಿಸಿ ಅಂತ ಹೇಳುತ್ತದೆ, ಧರ್ಮದ ತತ್ವ, ಆದರ್ಶ ಪಾಲನೆ ಮಾಡಲಿ, ಸರ್ವ ಜನಾಂಗದ ಶಾಂತಿಯ ತೋಟ ನಮ್ಮದಾಗಬೇಕು ಎಂದರು
ಕೋಮು ಸೌಹಾರ್ದತೆ ಇದ್ದರೆ ರಾಜ್ಯ, ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಅದಕ್ಕಾಗಿ ನಾವು ಕೋಮು ಸೌಹಾರ್ದ ಕಾಪಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೌಹಾರ್ದಕ್ಕೆ ವಿಶೇಷ ಗಮನ ಕೊಡಬೇಕು. ಸುಳ್ಳು ಸುದ್ದಿ ಹರಡಿದ್ರೆ ಕಾನೂನು ತಂದು ಕೇಸ್ ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.





