ಕರಾವಳಿ

ಪುತ್ತೂರು| ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಗಂಭೀರ ಆರೋಪ ಮಾಡಿದ ಶಾಸಕ ಅಶೋಕ್ ರೈ

ಪುತ್ತೂರು: ರಥೋತ್ಸವ ಸಮಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಹೆಸರಿನಲ್ಲಿ ರಶೀದಿ ಮಾಡಿಸಿ, ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಂಡು ಹೋದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಶೀದಿ ಮಾಡಿಸಿದ 25 ಸಾವಿರ ಹಣವನ್ನು ಕೊಡದೆ ಮಹಾಲಿಂಗೇಶ್ವರ ದೇವರಿಗೆ ವಂಚನೆ ಮಾಡಿ ಇದೀಗ ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಆರೋಪಿಸಿದ್ದಾರೆ.


ಮಾಧ್ಯಮದ ಜೊತೆ ಮಾತನಾಡಿದ ಅವರು ಅಶೋಕ ಜನಮನ ಯಶಸ್ವಿಯಾಗಿ ನಡೆದಿದೆ. ಮಳೆ ಬಂದು ಸ್ವಲ್ಪ ಅಡಚಣೆಯಾಗಿದೆ. ನಿರೀಕ್ಷೆಗೂ ಮೀರಿ ಜನ ಸೇರಿದ ಕಾರಣ ಸ್ವಲ್ಪ ಸಮಸ್ಯೆಯಾಗಿದೆ ಅದನ್ನು ಪರಿಹರಿಸಲಾಗಿದೆ. ಸೇರಿದ ಜನರನ್ನು ಕಂಡು ಮಠಂದೂರಿಗೆ ಸಹಿಸಲು ಸಾಧ್ಯವಾಗದೆ ಸುದ್ದಿಗೋಷ್ಟಿ ನಡೆಸಿ‌ ಸುಳ್ಳುಗಳ ಸರಮಾಲೆಯನ್ನೇ ಹೇಳಿದ್ದಾರೆ. ಮುಖ್ಯಮಂತ್ರಿಗಳು ರಾಜಕೀಯ‌ ಮಾತನಾಡಿಲ್ಲ. ಪಂಚ ಗ್ಯಾರಂಟಿಯನ್ನು ಜಾರಿಗೆ ಮಾಡಿದ್ದು ಸಿದ್ದರಾಮಯ್ಯ ಅವರು ಅದನ್ನು ಸಭೆಯಲ್ಲಿ ಹೇಳಿದ್ದಾರೆ. ಸರಕಾರದ ಯೋಜನೆಯನ್ನು ಸಾರ್ವಜನಿಕ ಸಭೆಯಲ್ಲಿ ಹೇಳುವುದು ತಪ್ಪಲ್ಲ ಅಷ್ಟು ತಿಳುವಳಿಕೆ ಇಲ್ಲದ ಮಠಂದೂರು ದೇವರಿಗೆ ವಂಚನೆ ಮಾಡಿದ್ದು ಯಾಕೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.


ಚುನಾವಣೆಯ ಸಮಯದಲ್ಲಿ ಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವ ಬಿಜೆಪಿಗೆ ಅಭಿವೃದ್ದಿ ಬೇಕಿಲ್ಲ. ಇಲ್ಲಿ ಧರ್ಮಗಳ ನಡುವೆ ಹೊಡೆದಾಟ ನಡೆಸಿ ಅಮಾಯಕ ಬಡ ಕುಟುಂಬದ ಯುವಕರನ್ನು ಜೈಲಿಗೆ ಕಳುಹಿಸಿ ಅವರ ಜೀವನವನ್ನೇ ಹಾಳು ಮಾಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸುತ್ತಿರುವ ಬಿಜೆಪಿ, ಮಾಜಿ ಶಾಸಕರಿಗೆ ಸಿ ಎಂ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಹೇಳಿದರು.

ಮಾಜಿ ಶಾಸಕ ಮಠಂದೂರು ಅವರ ಇನ್ನಷ್ಟು ಸ್ಪೋಟಕ ವಿಚಾರಗಳು ನನ್ನಲ್ಲಿದೆ. ಸಮಯ ಸಂದರ್ಭ ಬಂದಾಗ ಅದನ್ನು ಹೊರಗೆ ಬಿಡುವೆ ಎಂದು‌ ಶಾಸಕ ಅಶೋಕ್ ರೈ ಹೇಳಿದರು.

Leave a Reply

Your email address will not be published. Required fields are marked *

error: Content is protected !!