ಮಂಗಳೂರು: ರಸ್ತೆ ಗುಂಡಿಗೆ ಯುವತಿ ಬಲಿ
ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಯ ಕಾರಣ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಮಹಿಳೆಯೊಬ್ಬರು ಲಾರಿಯಡಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಸೆ.9ರಂದು ಬೆಳಗ್ಗೆ ನಗರ ಹೊರವಲಯದ ಕೂಳೂರು ಬಳಿ ನಡೆದಿದೆ. ಮೃತರನ್ನು ಮಾಧವಿ ಎಂದು ಗುರುತಿಸಲಾಗಿದೆ.

ಇವರು ತನ್ನ ದ್ವಿಚಕ್ರ ವಾಹನದಲ್ಲಿ ಕೂಳೂರು ಕಡೆಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆ ಕಡೆಗೆ ತೆರಳುತ್ತಿದ್ದ ವೇಳೆ ಈ ಅಫಘಾತ ಸಂಭವಿಸಿದೆ. ರಸ್ತೆಯಲ್ಲಿರುವ ಗುಂಡಿ ಕಾರಣ ಮಾಧವಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ ಎನ್ನಲಾಗಿದೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಮೀನು ಸಾಗಾಟದ ಲಾರಿ ಅವರ ಮೇಲೆ ಹರಿದ ಪರಿಣಾಮ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.





