ಕುಂಬ್ರ: ಮನೆಗೆ ಬೆಂಕಿ, ಅಪಾರ ನಷ್ಟ
ಪುತ್ತೂರು: ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಅ.18ರಂದು ನಡೆದಿದೆ.

ಪಾದೆಡ್ಕ ನಿವಾಸಿ ಪದ್ಮಾವತಿ ಎಂಬವರ ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ಮನೆಯೊಳಗೆ ಇಟ್ಟಿದ್ದ ರೂ.15000 ನಗದು, ದಾಖಲೆ ಹಾಗೂ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಗುಡಿಸಲಿಗೆ ಗೋಡೆ ಇಲ್ಲದೇ ಇರುವುದರಿಂದ ಗುಡಿಸಲಿನ ಸುತ್ತ ನೆಟ್ ಅಳವಡಿಸಲಾಗಿದ್ದು ಎರಡು ಬದಿಯ ನೆಟ್ ಸಂಪೂರ್ಣ ಸುಟ್ಟು ಹೋಗಿದೆ. ಪದ್ಮಾವತಿ ಅವರ ಪತಿ ನಿಧನ ಹೊಂದಿದ್ದು ಈ ಮನೆಯಲ್ಲಿ ಪದ್ಮಾವತಿ ಮತ್ತು ಅವರ 8 ವರ್ಷದ ಪುತ್ರ ವಾಸವಾಗಿದ್ದಾರೆ.
ಪದ್ಮಾವತಿಯವರು ಎಂದಿನಂತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಸ್ಥಳೀಯರು ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವ ಬಗ್ಗೆ ತಿಳಿಸಿದ್ದು ಕೂಡಲೇ ಪದ್ಮಾವತಿ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಮನೆಯೊಳಗಿದ್ದ ದಿನಸಿ ಸಾಮಾನುಗಳೂ ಬೆಂಕಿಗಾಹುತಿಯಾಗಿದೆ.
ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವ ಮುಖಂಡ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ಅವರು ಕೂಡಲೇ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸ್ಥಳೀಯರಾದ ಹುಕ್ರ ಎಂಬವರು ಸಹಕಾರ ನೀಡಿದರು.
ಘಟನಾ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.