ಅಂತಾರಾಷ್ಟ್ರೀಯ

ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ  ಸಾಮಾಜಿಕ ಜಾಲತಾಣಗಳ ನಿಷೇಧ ಹಿಂಪಡೆದ ನೇಪಾಳ ಸರ್ಕಾರ

ಕಠ್ಮಂಡು: ನೇಪಾಳದಲ್ಲಿ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಖಾತೆ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ಅಲ್ಲಿನ ಸರ್ಕಾರ ಹೇರಿದ ನಿಷೇಧವನ್ನು ಹಿಂದಕ್ಕೆ ಪಡೆದಿದೆ. ಸರ್ಕಾರದ ಕ್ರಮದ ವಿರುದ್ಧ ನಡೆದ ಭಾರೀ ಪ್ರತಿಭಟನೆ ಬೆನ್ನಲ್ಲೇ ನೇಪಾಳ ಸರ್ಕಾರ ಈ ಘೋಷಣೆ ಮಾಡಿದೆ.


ಸಚಿವ ಸಂಪುಟದ ತುರ್ತು ಸಭೆ ಕರೆದು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಾಸ್ ಪಡೆಯಲಾಗಿದೆ. ಇನ್ನು ಮುಂದೆ ಎಂದಿನಂತೆ ಸೋಷಿಯಲ್ ಮೀಡಿಯಾ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ನೇಪಾಳ ಸರಕಾರ ಹೇಳಿದೆ.



ನೇಪಾಳ ಸರ್ಕಾರವು ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿದಂತೆ 26 ಸಾಮಾಜಿಕ ತಾಣಗಳ ಮೇಲೆ ನಿರ್ಬಂಧ ಹೇರಿತ್ತು. ಸಾಮಾಜಿಕ ಜಾಲತಾಣಗಳ ನೋಂದಣಿ ಕಡ್ಡಾಯ ಎಂಬ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಂಡಿತ್ತು. ಆದರೆ ಯಾವುದೇ ಸಾಮಾಜಿಕ ಜಾಲತಾಣಗಳು ನೋಂದಣಿಯಾಗದ ಹಿನ್ನೆಲೆ ನೇಪಾಳ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು.

ಸರ್ಕಾರದ ಈ ನಿರ್ಧಾರದ ವಿರುದ್ಧ ನೇಪಾಳದ ಜನರು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರತಿಭಟನಾಕಾರರ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ನೇಪಾಳ ಸರ್ಕಾರ ಸಾಮಾಜಿಕ ತಾಣಗಳ ಮೇಲಿನ ನಿಷೇಧವನ್ನು ಹಿಂಪಡೆದಿದೆ.

Leave a Reply

Your email address will not be published. Required fields are marked *

error: Content is protected !!