ಜಾನುವಾರು ಕಳವು, ಅಂಗಾಂಗ ಪತ್ತೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿ ಆ.14ರಂದು ನಡೆದ ಜಾನುವಾರು ಕಳವು ಹಾಗೂ ಮರುದಿನ ಅದರ ಅಂಗಾಂಗಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲ-ಚೆಂಬುಗುಡ್ಡೆ ನಿವಾಸಿ ಇರ್ಶಾದ್ (34), ಮಂಗಳೂರು-ಕುದ್ರೋಳಿ ನಿವಾಸಿ ಮುಹಮ್ಮದ್ ಮನ್ಸೂರ್ (48) ಹಾಗೂ ಮಂಗಳೂರು-ಕಣ್ಣೂರು ನಿವಾಸಿ ಅಬ್ದುಲ್ ಅಝೀಂ (18) ಎಂದು ಗುರುತಿಸಲಾಗಿದೆ.
ಆ.14ರಂದು ತುಂಬೆ ಬಳಿ ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಮರುದಿನ ಅಲ್ಲೇ ಸಮೀಪದಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೆ.5ರಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿಚಾರಣೆಯ ವೇಳೆ ಗುರುವಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲೂ ಆರೋಪಿಗಳಾಗಿರುವುದು ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.