ಸುಳ್ಳು ದೂರು ನೀಡಿರುವ ಆರೋಪಿಯ ಪರ ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಪ್ರಸಾರ: ಪ್ರಕರಣ ದಾಖಲು
ಬಂಟ್ವಾಳ: ಸುಳ್ಳು ದೂರು ನೀಡಿರುವ ಆರೋಪಿಯ ಪರವಾಗಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಪೇಜ್‌ನಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.13ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರುದಾರ ಉಮರ್ ಫಾರೂಕ್ ಎಂಬವರು ದೇರಾಜೆ ಬಳಿ ಇಬ್ಬರು ಅಪರಿಚಿತರು ಕೊಲೆ ಮಾಡಲು ಯತ್ನಿಸಿರುವ ಬಗ್ಗೆ ನೀಡಿದ ದೂರನ್ನು ಪೊಲೀಸರು ತನಿಖೆ ನಡೆಸಿದ್ದು, ಇದೊಂದು ಸುಳ್ಳು ದೂರಾಗಿರುವುದರಿಂದ ಉಮರ್ ಫಾರೂಕ್ ವಿರುದ್ದ ಆಗಸ್ಟ್ 26 ರಂದು ಪ್ರಕರಣ ದಾಖಲಾಗಿದೆ.
ಈ ವಿಚಾರವಾಗಿ ಆ.28ರಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್‌ನ ಆಶ್ರಫ್ ತಲಪಾಡಿ ಎಂಬ ಪೇಜ್‌ನಲ್ಲಿ ಕಾನೂನು ಬದ್ದವಾದ ಆಧಾರಗಳು ಇಲ್ಲವೆಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದನೆ ಮಾಡಿದ ಬಂಟ್ವಾಳ ತಾಲೂಕಿನ ಅಶ್ರಫ್ ಎಂಬವರಿಗೆ ನೋಟಿಸ್ ಜಾರಿ ಮಾಡಿ ಆತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.