ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿದ ಯೆಮೆನ್
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ವರದಿಯಾಗಿದೆ.

ಮರಣದಂಡನೆ ಜು.16ಕ್ಕೆ ನಿಗದಿಪಡಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದ ಪ್ರಿಯಾ, ಜುಲೈ 2017 ರಲ್ಲಿ ಯೆಮೆನ್ ಪ್ರಜೆಯೊಬ್ಬರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಈ ಶಿಕ್ಷೆಗೆ ಗುರಿಯಾಗಿದ್ದರು.
ಯೆಮನ್‌ನ ಸ್ಥಳೀಯ ಅಧಿಕಾರಿಗಳು ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.
2020 ರಲ್ಲಿ, ಯೆಮೆನ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು ಮತ್ತು ದೇಶದ ಸುಪ್ರೀಂ ನ್ಯಾಯಾಂಗ ಮಂಡಳಿಯು ನವೆಂಬರ್ 2023 ರಲ್ಲಿ ಅವರ ಮೇಲ್ಮನವಿಯನ್ನು ವಜಾಗೊಳಿಸಿತು.
ಪ್ರಮುಖ ಭಾರತೀಯ ಸುನ್ನಿ ನಾಯಕ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಈ ವಿಚಾರದಲ್ಲಿ ಎಂಟ್ರಿ ಕೊಟ್ಟ ಬಳಿಕ ಮಹತ್ವದ ಬೆಳವಣಿಗೆ ನಡೆದಿದ್ದು ಅವರ ಮಧ್ಯಸ್ಥಿಕೆಯ ಮೂಲಕ ಸಭೆಯನ್ನು ಏರ್ಪಡಿಸಲಾಗಿತ್ತು. ಒಂದು ವೇಳೆ ಎಪಿ ಉಸ್ತಾದ್ ಈ ವಿಚಾರಕ್ಕೆ ಬರದೇ ಇರುತ್ತಿದ್ದಲ್ಲಿ ನಿಮಿಷ ಪ್ರಿಯಾ ಅವರನ್ನು ಜು.16ರಂದು ಗಲ್ಲು ಶಿಕ್ಷೆಗೆ ಒಳಪಡಿಸುವ ಎಲ್ಲಾ ಸಾಧ್ಯತೆಗಳಿತ್ತು ಎಂದು ಹೇಳಲಾಗುತ್ತಿದೆ. ಸರಕಾರಿ, ರಾಜತಾಂತ್ರಿಕ ತಾಂತ್ರಿಕ ಮಟ್ಟದಲ್ಲಿ ನಿರೀಕ್ಷಿತ ಫಲ ಸಿಗದಿದ್ದಾಗ ಮಧ್ಯಸ್ತಿಕೆ ವಹಿಸಿದ ಎಪಿ ಉಸ್ತಾದರ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು ಅವರ ಜಾಗತಿಕ ವರ್ಚಸ್ಸು ಇದೀಗ ಭಾರೀ ಸದ್ದು ಮಾಡುತ್ತಿದೆ.
ಈ ಮೊದಲು ಯಾವುದೇ ಸಂವಹನ ಸಾಧ್ಯವಾಗಿರಲಿಲ್ಲವಾದ್ದರಿಂದ, ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಕುಟುಂಬವು ಇಚ್ಛಿಸಿರುವುದು ಗಮನಾರ್ಹ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಸೋಮವಾರ, ಕೇಂದ್ರವು ಈ ವಿಷಯದಲ್ಲಿ ತನಗೆ ಸೀಮಿತ ಆಯ್ಕೆಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ಅಟಾರ್ನಿ ಜನರಲ್ ಆರ್ ವೆಂಕಟರಮಣಿ, “ಭಾರತ ಸರ್ಕಾರವು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದರು.