ಟಿ20 ವಿಶ್ವಕಪ್ ಕ್ರಿಕೆಟ್: ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ತಾನಕ್ಕೆ ಭರ್ಜರಿ ಜಯ
ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದ 14ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಭರ್ಜರಿ ಜಯ ಸಾಧಿಸಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು.

ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರನ್ ಮೊದಲ ವಿಕೆಟ್ಗೆ 103 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಇಬ್ರಾಹಿಂ ಝದ್ರಾನ್ (44) ರನ್ ಗಳಿಸಿದರೆ ಬಳಿಕ ಬಂದ ಅಝ್ಮತುಲ್ಲಾ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಹಮಾನುಲ್ಲ ಗುರ್ಬಾಝ್ 56 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ 80 ರನ್ ಸಿಡಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.
160 ರನ್ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡ ಮೊದಲ ಓವರ್ನ ಮೊದಲ ಎಸೆತದಲ್ಲೇ ಫಿನ್ ಅಲೆನ್ (0) ರನ್ನು ಕ್ಲೀನ್ ಬೌಲ್ಡ್ ಮಾಡಿದ ಫಾರೂಖಿ 3ನೇ ಓವರ್ನಲ್ಲಿ ಡೆವೊನ್ ಕಾನ್ವೆ (8) ವಿಕೆಟ್ ಪಡೆದರು.
ಅಂತಿಮವಾಗಿ ನ್ಯೂಝಿಲೆಂಡ್ ತಂಡವು 15.2 ಓವರ್ಗಳಲ್ಲಿ 75 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಅಫ್ಘಾನಿಸ್ತಾನ್ ತಂಡವು 84 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಅಫ್ಘಾನಿಸ್ತಾನ್ ಪರ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿದ ರಶೀದ್ ಖಾನ್ 4 ವಿಕೆಟ್ ಕಬಳಿಸಿ ಮಿಂಚಿದರೆ, ಎಡಗೈ ವೇಗಿ ಫಝಲ್ಹಕ್ ಫಾರೂಖಿ 3.2 ಓವರ್ಗಳಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರು. ಮೊಹಮ್ಮದ್ ನಬಿ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ತಂಡವು ಗ್ರೂಪ್-ಸಿ ಅಂಕ ಪಟ್ಟಿಯಲ್ಲಿ 4 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿದೆ.