ಗುರುವಾಯನಕೆರೆ: ಅಂಗಡಿಗೆ ಬೆಂಕಿ ಹಚ್ಚಿದ ವ್ಯಕ್ತಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆ ಎಂಬಲ್ಲಿ ದಿನಸಿ ಅಂಗಡಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ಬೆಂಕಿ ಹಚ್ಚಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುವೆಟ್ಟು ಗ್ರಾಮದ ನಿವಾಸಿ ಸದಕುತುಲ್ಲ ಎಂಬವರು ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ಜು.9ರಂದು ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಅವರು ಮರು ದಿನ ಬೆಳಿಗ್ಗೆ ಅಂಗಡಿಗೆ ಬೆಳ್ತಂಗಡಿ ಬಳಂಜ ಗ್ರಾಮದ ನಿವಾಸಿ ಉಮೇಶ್ ಬಂಗೇರ ಎಂಬಾತ ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಕೂಡಲೇ ಸದಕತುಲ್ಲ ಅವರು ಸ್ಥಳಕ್ಕೆ ಬಂದು ಸ್ಥಳಿಯರೊಂದಿಗೆ ಸೇರಿ ಬೆಂಕಿಯನ್ನು ನಂದಿಸಿದ್ದಾರೆ.
ಸದಕತುಲ್ಲ ಅವರು ಅಂಗಡಿಗೆ ಅಳವಡಿಸಿದ 2 ಫ್ಲೆಕ್ಸ್ ಸುಟ್ಟು ಹೋಗಿದ್ದು, 10 ಪ್ಲಾಸ್ಟಿಕ್ ಉಪ್ಪಿನ ಚೀಲಗಳಿಗೆ ಹಾನಿಯಾಗಿದೆ. ಆರೋಪಿ ಉಮೇಶ್ ಬಂಗೇರ, ಸಾಮಾನು ಖರೀದಿಯ ದುಡ್ಡನ್ನು ಸದಕತುಲ್ಲ ಅವರಿಗೆ ಬಾಕಿಯಿರಿಸಿದ್ದು, ಅದನ್ನು ಸದಕತುಲ್ಲ ಕೇಳಿದ್ದಕ್ಕೆ ಕೋಪಗೊಂಡು ಈ ಕೃತ್ಯವನ್ನು ಎಸಗಿರುವುದಾಗಿ ತಿಳಿದು ಬಂದಿದೆ. ಬೆಂಕಿ ಹಚ್ಚಿದ್ದರಿಂದ ತನಗೆ 3000/- ರೂ ನಷ್ಟ ಉಂಟಾಗಿರುವುದಾಗಿ ಸದಕತುಲ್ಲ ಅವರು ನೀಡಿದ ದೂರಿನಂತೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ: 56/2025 ಕಲಂ: 326(f), 324(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.