ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ಹೊಸ ದಾಖಲೆ ಬರೆದ ಪೊಲಾರ್ಡ್
ಟಿ20 ಕ್ರಿಕೆಟ್‌ನಲ್ಲಿ ಕೀರನ್ ಪೊಲಾರ್ಡ್ ಯಾರೂ ಮಾಡದ ಹೊಸ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಡಲ್ಲಾಸ್ನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 14ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪೊಲಾರ್ಡ್ ವಿಶೇಷ ಸಾಧನೆ ಮಾಡಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 700 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಪೊಲಾರ್ಡ್ ಅವರನ್ನು ಹೊರತುಪಡಿಸಿ ಯಾವುದೇ ಆಟಗಾರ ಟಿ20 ಕ್ರಿಕೆಟ್‌ನಲ್ಲಿ 600 ಪಂದ್ಯಗಳನ್ನು ಕೂಡ ಆಡಿಲ್ಲ.
ಇತ್ತ ವೆಸ್ಟ್ ಇಂಡೀಸ್, ಮುಂಬೈ ಇಂಡಿಯನ್ಸ್, ಎಂಐ ನ್ಯೂಯಾರ್ಕ್, ಟ್ರಿನ್ಬಾಗೊ ನೈಟ್ ರೈಡರ್ಸ್ ಸೇರಿದಂತೆ ಹಲವು ತಂಡಗಳ ಪರ ಕಣಕ್ಕಿಳಿದಿರುವ ಪೊಲಾರ್ಡ್ ಇದೀಗ 700 ಪಂದ್ಯಗಳ ಮೈಲುಗಲ್ಲು ಮುಟ್ಟಿದ್ದಾರೆ. ಈ ಏಳು ನೂರು ಮ್ಯಾಚ್ ಗಳಲ್ಲಿ ವಿಂಡೀಸ್ ದಾಂಡಿಗ 622 ಇನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ದಾರೆ.