ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು
ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಕಿಡಿಗೇಡಿಗಳು ಅದನ್ನು ಸುಟ್ಟು ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದಿದೆ.

ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಅನ್ನು ಕದ್ದೊಯ್ದು ಸುಟ್ಟು ಹಾಕಲಾಗಿದೆ. ಪ್ರಾರ್ಥನೆಗೆಂದು ಬಂದವರಿಗೆ ಕುರಾನ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಪ್ರಾರ್ಥನೆ ಮುಗಿಸಿದ ಬಳಿಕ ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಸುಟ್ಟು ಹಾಕಿರುವುದು ಕಂಡುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ತಡರಾತ್ರಿ ಮಸೀದಿಯೊಳಗಿನ ಕುರಾನ್ ಕದ್ದು ಕೊಂಡೊಯ್ದಿದ್ದಾರೆ. ಬಳಿಕ ಕುರಾನ್ ಅನ್ನು ಸುಟ್ಟು ಹಾಕಿದ್ದಾರೆಂಬ ಮಾಹಿತಿ ಇದೆ. ಆರೋಪಿಗಳ ಬಂಧನಕ್ಕಾಗಿ ಈಗಾಗಲೇ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಸದ್ಯ ಯುವಕರು ಪ್ರತಿಭಟನೆ ಮಾಡಲು ಅವಕಾಶ ಕೇಳಿದ್ದಾರೆ. ಈ ಸಮಯದಲ್ಲಿ ಪ್ರತಿಭಟನೆ ಬೇಡ ಎಂದು ಮನವಿ ಮಾಡಿದ್ದೇವೆ. ಅವರು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.