ಮಂಗಳೂರು: ಯುವಕನ ಗುಂಪು ಹತ್ಯೆ, 15 ಮಂದಿ ಅರೆಸ್ಟ್
ಮಂಗಳೂರು: ಕುಡುಪು ಸಮೀಪ ರವಿವಾರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 30 ಜನರ ಗುಂಪಿನಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿರುವುದು ಖಚಿತವಾಗಿದೆ ಎಂದು ಹೇಳಿದರು. ಅದರಲ್ಲಿ 25ಕ್ಕೂ ಹೆಚ್ಚು ಆರೋಪಿಗಳ ಗುರುತು ಪತ್ತೆ ಮಾಡಿದ್ದು, 15 ಮಂದಿಯನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಆರೋಪಿಗಳು ಹಲ್ಲೆಯ ಬಗ್ಗೆ ಒಪ್ಪಿಕೊಂಡಿದ್ದು, ಆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಸಚಿನ್, ದೇವದಾಸ್, ಮಂಜುನಾಥ್, ಸಹದೀಪ್ ಸೇರಿ 15 ಮಂದಿಯನ್ನು ಬಂಧಿಸಲಾಗಿದೆ ಎಂದರು. ಮಾಜಿ ಕಾರ್ಪೋರೇಟರ್ ಪತಿಯ ಹೆಸರು ಕೇಳಿ ಬರುತ್ತಿದ್ದು, ಆ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಹತ್ಯೆಗೊಳಗಾದ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಆದರೆ ಆತನ ಖಾಸಗಿ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಈ ಆಘಾತವೇ ಸಾವಿಗೆ ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ. ಹಲ್ಲೆಯಿಂದ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಕಾರ್ಯ ನಡೆಯಲಿದ್ದು ಆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದರು.



