ಪೆರುವಾಜೆ ಕಾಲೇಜು ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಧರಣಿ
ಉಪನ್ಯಾಸಕಿಯೋರ್ವರು ಕಾಲೇಜು ವಿದ್ಯಾರ್ಥಿ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದ ಘಟನೆ ಜು.03 ರಂದು ಪೆರುವಾಜೆ ಸರಕಾರಿ ಕಾಲೇಜಿನಲ್ಲಿ ನಡೆದಿದೆ.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನಿತಾ ಎಂಬವರು ಎಂ.ಕಾಂ. ವಿದ್ಯಾರ್ಥಿ ದೀಕ್ಷೀತ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ದ್ವಾರದ ಬಳಿ ಧರಣಿ ನಡೆಸಿ ಉಪನ್ಯಾಸಕಿ ವಿರುದ್ಧ ಘೋಷಣೆ ಕೂಗಿ, ಮೇಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದು, ಮೇಲಾಧಿಕಾರಿಗಳು ಬಂದು ಕ್ರಮ ಕೈಗೊಳ್ಳುವ ವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರಿಗೂ ಮನವಿ ಸಲ್ಲಿಸಿದ್ದಾರೆ ಎಂದು ವಿದ್ಯಾರ್ಥಿ ಪ್ರಮುಖರು ತಿಳಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ತರಗತಿ ಪರೀಕ್ಷೆಯನ್ನೂ ಬಹಿಷ್ಕರಿಸಿ ಧರಣಿಯಲ್ಲಿ ಭಾಗವಹಿಸಿದ್ದರು.