ಅಮಾಯಕ ಯುವಕನ ಕೊಲೆ: ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ
ಮಂಗಳೂರು: ಬಂಟ್ವಾಳ ತಾಲೂಕಿನ ಯುವಕ ಅಬ್ದುಲ್ ರಹಿಮಾನ್ ಭೀಕರ ಹತ್ಯೆ ಬಳಿಕ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ರಾಜೀನಾಮೆ ಪರ್ವ ಪ್ರಾರಂಭವಾಗಿದ್ದು ಅನ್ಯಾಯವಾಗಿ ಅಮಾಯಕ ಯುವಕನೋರ್ವ ಪ್ರಾಣ ಕಳೆದುಕೊಂಡರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವ ವಿಚಾರ ವರದಿಯಾಗಿದೆ.

ಇತ್ತೀಚೆಗೆ ಪ್ರತೀಕಾರದ ಹೇಳಿಕೆಗಳು, ಕೋಮು ದ್ವೇಷಿ ಸಭೆಗಳು ಬಹಿರಂಗವಾಗಿ ನಡೆಯುತ್ತಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ವಿಫಲವಾಗಿದ್ದು ಕೋಮು ಪ್ರಚೋದನಕಾರಿ ಭಾಷಣದ ಪರಿಣಾಮ ಅಮಾಯಕ ಯುವಕ ಅಬ್ದುಲ್ ರಹಿಮಾನ್ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹಾಗೂ ಗೃಹ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಮುಖಂಡರು ಮತ್ತು ಕಾರ್ಯಕರ್ತರು ಅವರ ರಾಜೀನಾಮೆಗೂ ಆಗ್ರಹಿಸುತ್ತಿದ್ದಾರೆ.
ಈಗಾಗಲೇ ಜಿಲ್ಲೆಯ ಕಾಂಗ್ರೆಸ್‌ನ ಕೆಲವು ಮುಖಂಡರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಇನ್ನಷ್ಟು ಮಂದಿ ರಾಜೀನಾಮೆ ನೀಡುವ ಸಿದ್ದತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಒಂದೆಡೆ ಸಭೆ ಸೇರಿ ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆಯೂ ಚರ್ಚೆ ನಡೆಸುವ ಬಗ್ಗೆ ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆಯಾದರೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಒಟ್ಟಿನಲ್ಲಿ ಅಮಾಯಕ ಯುವಕನ ಕೊಲೆಯಲ್ಲಿ ಸ್ವಪಕ್ಷದ ವಿರುದ್ದವೇ ಕಾಂಗ್ರೆಸ್‌ನ ಮುಸ್ಲಿಂ ಕಾರ್ಯಕರ್ತರು ಮತ್ತು ನಾಯಕರು ಗರಂ ಆಗಿದ್ದು ನಮಗೆ ನ್ಯಾಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ.