ವೈಭವ್ ಸೂರ್ಯವಂಶಿ ವೇಗದ ಶತಕದ ವೈಭವ
ಜೈಪುರ: ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ 14 ವರ್ಷದ ವೈಭವ್ ಸೂರ್ಯವಂಶಿ ಗುಜರಾತ್ ಟೈಟನ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದು, ದಾಖಲೆಯ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಜೈಪುರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. ಬೃಹತ್ ಗುರಿ ಬೆನ್ನಟ್ಟಿರುವ ರಾಜಸ್ಥಾನಕ್ಕೆ ಯುವ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟಿದ್ದಾರೆ.
ಅದರಲ್ಲೂ ಮೊದಲ ಐಪಿಎಲ್ ಸೀಸನ್ ಆಡುತ್ತಿರುವ 14 ವರ್ಷದ ವೈಭವ್, ತಮ್ಮ ಸ್ಪೋಟಕ ಆಟದ ಮೂಲಕ ಗುಜರಾತ್ ಬೌಲರ್ಗಳ ಬೆವರಿಳಿಸುವುದರೊಂದಿಗೆ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಈ ಸೀಸನ್ನ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ವೈಭವ್ ಕೇವಲ 35 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದ್ದಾರೆ.
ವೈಭವ್ ಸೂರ್ಯವಂಶಿ ಆರಂಭದಲ್ಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಜೈಸ್ವಾಲ್ – ಸೂರ್ಯವಂಶಿ ಜೋಡಿ ಮೊದಲ ವಿಕೆಟ್ ಗೆ 166 ರನ್ ಗಳ ದಾಖಲೆಯ ಜೊತೆಯಾಟವಾಡಿದರು. ವೈಭವ್ ಸೂರ್ಯ ವಂಶಿ ಕೇವಲ 38 ಎಸೆತಗಳಲ್ಲಿ ಬರೊಬ್ಬರಿ 11 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಔಟಾದರು.





