ಚಲಿಸುತ್ತಿದ್ದ ಕಾರಿನಲ್ಲಿ ಹುಚ್ಚಾಟ: 6 ಯುವಕರು ಪೊಲೀಸ್ ವಶಕ್ಕೆ,
ಸುಳ್ಯ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಆರು ಯುವಕರ ಗುಂಪೊಂದು ಅಪಾಯಕಾರಿ ಸ್ಟಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಚ್ಚಾಟ ಮೆರೆದ ಯುವಕರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಸುಳ್ಯ ಸಮೀಪದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿದ್ದ 6 ಮಂದಿ ಅಪಾಯಕಾರಿ ಸ್ಟಂಟ್ ಮಾಡಿದ್ದರು. ಈ ಯುವಕರ ದುಸ್ಸಾಹಸದ ವಿಡೀಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಇಬ್ಬರು ಯುವಕರು ವೇಗವಾಗಿ ಚಲಿಸುತ್ತಿರುವ ಕಾರಿನ ಸನ್‌ರೂಫ್‌ನಿಂದ ಹೊರಗೆ ನಿಂತಿದ್ದರೆ, ಇಬ್ಬರು ಹಿಂಬದಿಯ ಬಾಗಿಲುಗಳಿಂದ ಹೊರಗೆ ನೇತಾಡುತ್ತಿರುವುದು ಕಾಣಬಹುದು. ಮತ್ತಿಬ್ಬರು ಯುವಕರು ಮುಂಭಾಗದ ಪ್ರಯಾಣಿಕರ ಬಾಗಿಲುಗಳಿಂದ ಹೊರಬರುತ್ತಿರುವುದು ಕಂಡು ಬರುತ್ತದೆ.
ಈ ಬಗ್ಗೆ ಸುಳ್ಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದು, ಈ ದುಸ್ಸಾಹಸ ಮಾಡಿದ ಯುವಕರ ಗುಂಪು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರೆಂದು ಪತ್ತೆ ಮಾಡಿದ್ದಾರೆ. ಕಾರಿನಲ್ಲಿ 7 ಮಂದಿ ಇದ್ದು ಅವರು ಮಡಿಕೇರಿಯಿಂದ ಭಟ್ಕಳಕ್ಕೆ ತೆರಳುವ ವೇಳೆ ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ.
ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಿದ ಯುವಕರ ಗುಂಪನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ ಎನ್ನಲಾಗಿದೆ.