ನಾಪತ್ತೆಯಾಗಿದ್ದ ನವವಿವಾಹಿತೆ ಶವವಾಗಿ ನದಿಯಲ್ಲಿ ಪತ್ತೆ- ತನಿಖೆ ಆರಂಭಿಸಿದ ಪೊಲೀಸರು
ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ನವವಿವಾಹಿತೆ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಕಲಬುರಗಿಯ ಕಮಲಾಪುರ ತಾಲೂಕಿನ ಕುರಿಕೋಟಾದಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ನಾವದಗಿ ಗ್ರಾಮದ ಸೃಷ್ಟಿ ಮಾರುತಿ (21) ಎಂದು ಗುರುತಿಸಲಾಗಿದೆ.
ಡಿಗ್ರಿ ಐದನೇಯ ಸೇಮಿಸ್ಟರ್‌ನಲ್ಲಿ ಓದುತ್ತಿದ್ದ ಸೃಷ್ಟಿಗೆ ಇತ್ತೀಚೆಗೆ ಮದುವೆಯಾಗಿತ್ತು.
ಅತ್ತೆಯ ಮನೆಯಲ್ಲಿದ್ದೇ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ್ದರು.
ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆ ಗಂಡ ಮತ್ತು ಆತನ ಕುಟುಂಬಸ್ಥರು ಗಾಬರಿಗೊಂಡು ಗ್ರಾಮವೆಲ್ಲ ಹುಡುಕಾಟ ನಡೆಸಿದ್ದಾರೆ.
ಅಷ್ಟೇ ಅಲ್ಲ, ಸಂಬಂಧಿಕರಿಗೆ ಮತ್ತು ಸೃಷ್ಟಿ ಗೆಳತಿಯರಿಗೆ ಫೋನ್ ಮಾಡಿ ವಿಚಾರರಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ಸೃಷ್ಟಿ ಗಂಡನ ಕುಟುಂಬಸ್ಥರು ಡಿಸೆಂಬರ್ 14ರ ಬೆಳಗ್ಗೆ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಮನೆಯಿಂದ ಕಾಣೆಯಾಗಿ ಮೂರು ದಿನಗಳ ನಂತರ ಸೃಷ್ಟಿ ಕುರಿಕೋಟಾ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಹಾಗಾಂವ್ ಪೊಲೀಸರು ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದು ತನಿಖೆ ಆರಂಭಿಸಿದ್ದಾರೆ.