ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೃಹಲಕ್ಷ್ಮಿಯಲ್ಲಿ 4000 ರೂ ಸಿಗಬಹುದು: ಶಾಸಕ ಅಶೋಕ್ ರೈ
ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ 2000 ಅಕೌಂಟಿಗೆ ಬರುತ್ತಿದೆ ಇದೇ ಯೋಜನೆ ಮುಂದಿನ ಬಾರಿ ಅಧಿಕಾರಕ್ಕೆ ಬಂದಲ್ಲಿ 4000 ಆದರೂ ಆಗಬಹುದು ಎಂದು ಶಾಸಕ ಅಶೋಕ್ ರೈ ಹೇಳಿದರು. ಸರಕಾರದ ಬಡವರ ಪರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾರಣ ಜನ ಇಂದು ನೆಮ್ಮದಿಯಿಂದ ಇದ್ದಾರೆ. ಪ್ರತೀ ಕುಟುಂಬ ನೆಮ್ಮದಿಯ ಜೀವನ ಮಾಡುವಂತಾಗಿದೆ,ಇದು ಮುಂದೆಯೂ ಮುಂದುವರೆಯಬೇಕಾದರೆ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಮಾತ್ರ ಬಡವರ ಪರ ಕೆಲಸ ಮಾಡುತ್ತದೆ ಇದನ್ನು ಜನ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಹಿಂದೂ ವಿರೋಧಿಯಾಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಕಾಂಗ್ರೆಸ್ ಎಲ್ಲಾ ಧರ್ಮವನ್ನು ಗೌರವಿಸುವ ಪಕ್ಷ ಇದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಇದಕ್ಕೆ ಈ ಅಪಪ್ರಚಾರ ಎಂದರು.
ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೇರುವ ಕನಸು ಕಾಣುವ ಬಿಜೆಪಿಗೆ ಅಭಿವೃದ್ದಿ ಕೆಲಸ ಬೇಕಿಲ್ಲ, ವೋಟಿನ ಸಮಯದಲ್ಲಿ ಹಿಂದೂ- ಮುಸ್ಲಿಂ ವಿಚಾರ ಹೇಳಿದರೆ ಜನ ವೋಟು ಹಾಕುತ್ತಾರೆ ಎಂಬ ನಂಬಿಕೆ ಬಿಜೆಪಿಗೆ ಇದೆ. ಇದೇ ಕಾರಣಕ್ಕೆ ಪ್ರತೀ ಬಾರಿ ಚುನಾವಣೆ ಸಮಯದಲ್ಲಿ ಹಿಂದೂಮುಸ್ಲಿಂ ವಿಚಾರವನ್ನು ಬಿಜೆಪಿ ಮುನ್ನೆಲೆಗೆ ತರುತ್ತಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಪಾಯವಿದೆ ಎಂದು ಸುಳ್ಳು ಹೇಳಿ ಜನ ದಿಕ್ಕುತಪ್ಪಿಸುತ್ತಾರೆ. ಕಾಂಗ್ರೆಸ್ ನಿಂದ ಲಾಭ ಪಡೆದವರೂ ಕಾಂಗ್ರೆಸ್ ಗೆ ವಿರುದ್ದವಾಗಿರುವುದು ಖೇದಕರ ಸಂಗತಿಯಾಗಿದೆ ಎಂದು ಶಾಸಕರು ಹೇಳಿದರು.