ಕುಂಬ್ರ: ಕುಸಿತಗೊಂಡ 50 ವರ್ಷ ಹಳೆಯ ಬಾವಿಯನ್ನು ಮುಚ್ಚಿಸಿದ ಗ್ರಾಮ ಪಂಚಾಯತ್
ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ನೂತನ ಕಟ್ಟಡದ ಬಳಿ ಇದ್ದ ಸುಮಾರು 50 ವರ್ಷ ಹಳೆಯ ಬಾವಿಯು ಜು.6ರಂದು ದಿಢೀರನೇ ಕುಸಿತಗೊಂಡಿತ್ತು. ಪಂಚಾಯತ್ ಕಟ್ಟಡದ ಅಂಗಳದ ಬಳಿಯೇ ಇದ್ದ ಈ ಬಾವಿಯನ್ನು ಪಂಚಾಯತ್ ಕಟ್ಟಡ ನಿರ್ಮಾಣದ ವೇಳೆ ನವೀಕರಣಗೊಳಿಸಲಾಗಿತ್ತು. ಬಾವಿ ಕುಸಿತಗೊಂಡ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ತುರ್ತು ಸಭೆ ನಡೆಸಿ, ಬಾವಿಯನ್ನು ಮುಚ್ಚುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.
ಸಂಪೂರ್ಣ ಕುಸಿತಗೊಂಡಿದ್ದ ಬಾವಿಯು ಅಪಾಯಕಾರಿ ಸ್ಥಿತಿಯಲ್ಲಿತ್ತು. ಗ್ರಾಪಂ ಅಂಗಳದ ಬದಿಯಲ್ಲೇ ಇರುವುದು ಮತ್ತು ಅಂಗಳದ ಅರ್ಧ ಭಾಗ ಕೂಡ ಕುಸಿತಗೊಂಡಿರುವುದು ಅಲ್ಲದೆ ಪಕ್ಕದಲ್ಲಿದ್ದ ವಿದ್ಯುತ್ ಕಂಬ ಕೂಡ ಅಪಾಯದಲ್ಲಿರುವುದರಿಂದ ತಾತ್ಕಾಲಿಕವಾಗಿ ಬಾವಿಯನ್ನು ಮುಚ್ಚದೇ ಬೇರೆ ಯಾವುದೇ ದಾರಿ ಇಲ್ಲದೇ ಇರುವುದರಿಂದ ಗ್ರಾಪಂ ಬಾವಿಯನ್ನು ಮುಚ್ಚಿಸಿದೆ.
ಸುಮಾರು 50 ವರ್ಷ ಹಳೆಯದಾದ ಬಾವಿಯು ಸಂಪೂರ್ಣ ಕುಸಿತಗೊಂಡಿರುವುದರಿಂದ ಅದನ್ನು ದುರಸ್ತಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಅಲ್ಲದೆ ಇದೇ ರಸ್ತೆಯಲ್ಲಿ ಪ್ರತಿನಿತ್ಯ ಎಲ್‌ಕೆಜಿಯಿಂದ ಹಿಡಿದು ಕಾಲೇಜು ತನಕದ ವಿದ್ಯಾರ್ಥಿಗಳು ಓಡಾಟ ಮಾಡುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಇದನ್ನು ಮನಗಂಡ ಗ್ರಾಪಂ ತಾತ್ಕಾಲಿಕವಾಗಿ ಬಾವಿಯನ್ನು ಮಣ್ಣು ಹಾಕಿ ಮುಚ್ಚಿಸಿದೆ.
ಬಾವಿ ಮುಚ್ಚುವುದಕ್ಕೆ ವಿರೊಧ ವ್ಯಕ್ತಪಡಿಸಿ ಕಾಂಗ್ರೆಸ್ ಕುಂಬ್ರ ವಲಯಾಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿಯವರು ಶಾಸಕರಿಗೆ ದೂರು ನೀಡಿದ್ದಲ್ಲದೇ ಬಾವಿ ಮುಚ್ಚಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.