9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ದೋನಿಯನ್ನು ಟೀಕಿಸಿದ ಅಭಿಮಾನಿಗಳು
ಐಪಿಎಲ್ ಪಂದ್ಯಾಟದಲ್ಲಿ ಮಾ.28ರಂದು ಆರ್‌ಸಿಬಿ ವಿರುದ್ದ ನಡೆದ ಪಂದ್ಯಾಟದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಪಂದ್ಯಾಟದಲ್ಲಿ ಆರ್‌ಸಿಬಿ ತಂಡ 50 ರನ್‌ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 196 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದಲ್ಲದೇ ಆರಂಭದಲ್ಲೇ ವಿಕೆಟ್ ಕೂಡಾ ಕಳೆದುಕೊಂಡಿತು. ಚೆನ್ನೈ ದಾಂಡಿಗರ ನಿಧಾನಗತಿಯ ಬ್ಯಾಟಿಂಗ್ ತಂಡಕ್ಕೆ ಮುಳುವಾಯಿತು. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ತಂಡ ಕುಸಿತ ಕಂಡಾಗ ಅನುಭವಿ ಆಟಗಾರರು ತಮ್ಮ ಕ್ರಮಾಂಕಕ್ಕಿಂತಲೂ ಬೇಗನೇ ಬ್ಯಾಟಿಂಗ್‌ಗೆ ಇಳಿಯುವುದು ಸಾಮಾನ್ಯ, ಆದರೆ ಧೋನಿ ಅವರು ತಂಡ ಶೋಚನೀಯ ಪರಿಸ್ಥಿತಿಯಲ್ಲಿರುವಾಗಲೂ ತಮಗಿಂತ ಮೊದಲು ಬೌಲರ್ ಆರ್ ಅಶ್ವಿನ್ ಅವರನ್ನು ಕಳುಹಿಸಿ ಬಳಿಕ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಉದ್ದೇಶ ಮತ್ತು ಅಗತ್ಯವೇನಿತ್ತು ಎಂದು ಚೆನ್ನೈ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಧೋನಿ ಮೈದಾನಕ್ಕೆ ಇಳಿಯುವ ಸಂದರ್ಭ ಚೆನ್ನೈ ತಂಡ ಬಹುತೇಕ ಸೋಲಿನತ್ತ ಮುಖ ಮಾಡಿತ್ತು, ಆ ಸಂದರ್ಭದಲ್ಲಿ ಮೈದಾನಕ್ಕೆ ಬ್ಯಾಟಿಂಗ್ ಗೆ ಬಂದು ಕೊನೆಯ ಕ್ಷಣದಲ್ಲಿ ಒಂದೆರಡು ಸಿಕ್ಸ್, ಫೋರ್ ಹೊಡೆದು ಏನು ಪ್ರಯೋಜನ ಎಂದು ಖುದ್ದು ಧೋನಿ ಅಭಿಮಾನಿಗಳೇ ಪ್ರಶ್ನಿಸುತ್ತಿದ್ದಾರೆ. ಚೆನ್ನೈ ಸೋಲಬೇಕೆಂದೇ ಆಡಿದಂತಿತ್ತು ಎಂದೂ ಅಭಿಮಾನಿಗಳು ಟೀಕಿಸಿದ್ದಾರೆ. ಆರ್ ಅಶ್ವಿನ್ ಧೊನಿಗಿಂತ ದೊಡ್ಡ ಬ್ಯಾಟ್ಸ್‌ಮೆನ್ ಆದದ್ದು ಯಾವಾಗ ಎಂದೂ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಧೋನಿ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಧೋನಿ ಅವರ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.