ಕ್ರೈಂರಾಜ್ಯ

ಹೊನ್ನಾವರ ಪರಮೇಶ ಮೇಸ್ತ ಪ್ರಕರಣ: ಹತ್ಯೆಯಲ್ಲ, ಆಕಸ್ಮಿಕ ಸಾವು ; ಸಿಬಿಐ ತನಿಖಾ ವರದಿಯಲ್ಲಿ ಉಲ್ಲೇಖ

ಉತ್ತರ ಕನ್ನಡ: ಹೊನ್ನಾವರ ಪರಮೇಶ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಸಾವು ಎಂದು ಉಲ್ಲೇಖಿಸಲಾಗಿದೆ. ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವಂಬರ್ 16 ಕ್ಕೆ ತೀರ್ಪು ಕಾಯ್ದಿರಿಸಲಾಗಿದೆ.

ಪರಮೇಶ ಮೇಸ್ತ

ಘಟನೆ ಹಿನ್ನೆಲೆ:

ಡಿಸೆಂಬರ್ 6 2017 ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರಮೇಶ ಮೇಸ್ತ ಕಾಣೆಯಾಗಿದ್ದನು. ಮುಂದೆ ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿ ದೇವಾಸ್ಥಾನದ ಹಿಂಭಾಗದ ಶಟ್ಟಿ ಕೆರೆಯಲ್ಲಿ ಶವ  ಪತ್ತೆಯಾಗಿತ್ತು. ಇದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಡಿ.11ರಂದು ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಬಂದ್ ಕರೆ ನೀಡಿದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಪೊಲೀಸರು ಗಾಯಗೊಂಡರು, ವಾಹನಗಳು ಜಖಂಗೊಂಡಿದ್ದವು.

ಪ್ರಕರಣ ರಾಜಕೀಯ ರೂಪ ಪಡೆದುಕೊಂಡು ಬಿಜೆಪಿ ಘಟಾನುಘಟಿ ನಾಯಕರು ಬೀದಿಗೆ ಇಳಿದಿದ್ದರು ಬಿಜೆಪಿ  ಅಂದಿನ ಕಾಂಗ್ರೆಸ್​ ಸರ್ಕಾರದ ವಿರುದ್ದ ಆರೋಪ ಮಾಡಿತು. ಪರೇಶ್ ಮೇಸ್ತ ಹತ್ಯೆ ಮಾಡಲಾಗಿದೆ. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿತು. ರಾಜ್ಯಪಾಲರಿಗೂ ಈ ಕುರಿತು ದೂರು  ಕೂಡ ನೀಡಲಾಯಿತು.

ಪರೇಶ್ ಮೇಸ್ತ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ’ ಎಂದು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿಲ್ಲ. ಮೇಸ್ತ ಪೋಷಕರ ಒತ್ತಾಯದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿತ್ತು. ವಿಸೃತ ನಾಲ್ಕೂವರೆ ವರ್ಷ ತನಿಖೆ ನಡೆಸಿದ ಸಿಬಿಐ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

Leave a Reply

Your email address will not be published. Required fields are marked *

error: Content is protected !!